ಇನ್ನೆಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ಖರ್ಗೆ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ – Kannada News | Mallikarjun Kharge must apologise to the Prime Minister and people of India Pralhad Joshi urges

ನವದೆಹಲಿ, ಏಪ್ರಿಲ್ 21: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿರುವುದರಿಂದ ಚೆನ್ನೈನಲ್ಲಿ ಇಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವ ಭರದಲ್ಲಿ ಅವರು ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಇದಾದ ಬಳಿಕ ತಮ್ಮ ಹೇಳಿಕೆಗೆ ಅವರು ಸ್ಪಷ್ಟನೆ ನೀಡಿದ್ದರೂ ಅದು ವಿವಾದ ಸೃಷ್ಟಿಸಿದೆ. ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖರ್ಗೆಯವರು ಪ್ರಧಾನಿ ಮೋದಿಯವರ ಮತ್ತು ದೇಶದ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.

“ಮಲ್ಲಿಕಾರ್ಜುನ ಖರ್ಗೆಯವರ ಮಾತಿನಲ್ಲಿ ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷ ಈಗಾಗಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಅವರು ಇನ್ನೂ ಎಷ್ಟು ದಿನ ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ? ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ಅಧ್ಯಕ್ಷರ ಪಾತ್ರವನ್ನು ಮರೆತು ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ದುರಾದೃಷ್ಟ. ಇದಕ್ಕಾಗಿ ಅವರು ಪ್ರಧಾನಿ ಹಾಗೂ ಭಾರತದ ಜನತೆಯ ಕ್ಷಮೆಯಾಚಿಸಬೇಕು” ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವಿಯಾ ಕೂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿ ಕಾರಿದ್ದು, “ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದು, ಎಐಎಡಿಎಂಕೆ ಅವರೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಖರ್ಗೆ ಸಾರ್ವಜನಿಕ ಚರ್ಚೆಯನ್ನು ಇಷ್ಟೊಂದು ಕೆಳಮಟ್ಟಕ್ಕೆ ಎಳೆದಿರುವುದು ಇದೇ ಮೊದಲಲ್ಲ. ಆದರೆ ಈ ಹೇಳಿಕೆಯೊಂದಿಗೆ ಅವರು ತಮ್ಮನ್ನು ಮಾತ್ರ ಕುಗ್ಗಿಸಿಕೊಂಡಿಲ್ಲ, ಇಡೀ ಕಾಂಗ್ರೆಸ್‌ನ ಮನಸ್ಥಿತಿ ಇದೇ ಎಂಬುದನ್ನು ಬಹಿರಂಗಪಡಿಸಿದ್ದಾರೆ” ಎಂದು ಟೀಕಿಸಿದ್ದಾರೆ.

ವಿವಾದಕ್ಕೀಡಾದ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಉದ್ದೇಶ ನನಗಿಲ್ಲ. ನಾನು ಆ ಅರ್ಥದಲ್ಲಿ ಮಾತನಾಡಿದ್ದಲ್ಲ. ಅವರು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಯಾವಾಗಲೂ ಭಯಭೀತಗೊಳಿಸುತ್ತಾರೆ ಎಂಬುದು ನನ್ನ ಮಾತಿನ ತಾತ್ಪರ್ಯವಾಗಿತ್ತು. ಪ್ರಧಾನಿ ಮೋದಿ ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ. ಅವರು ಭಯೋತ್ಪಾದಕ ಎಂದು ನಾನು ಹೇಳಲಿಲ್ಲ. ಮೋದಿ ಯಾವಾಗಲೂ ಬೆದರಿಕೆ ಹಾಕುತ್ತಾರೆ. ಇಡಿ, ಐಟಿ ಮತ್ತು ಸಿಬಿಐನಂತಹ ಸಂಸ್ಥೆಗಳು ಅವರ ಕೈಯಲ್ಲಿವೆ. ಅವರು ಗಡಿನಿರ್ಣಯವನ್ನೂ ತಮ್ಮ ಕೈಗೆ ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಹೇಳಿದೆನಷ್ಟೇ” ಎಂದು ಸ್ಪಷ್ಟನೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *