ನವದೆಹಲಿ, ಜುಲೈ 28: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೊಸ ಇತಿಹಾಸ ಬರೆದಿದ್ದಾರೆ. ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆ 105 ಮಿಲಿಯನ್ (10.5 ಕೋಟಿ) ಗಡಿ ದಾಟಿದ್ದು, ಜಾಗತಿಕ ಮಟ್ಟದಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ರಾಜಕೀಯ ನಾಯಕ ಎನಿಸಿಕೊಂಡಿದ್ದಾರೆ. ವಿಶೇಷವೆಂದರೆ, ಕೇವಲ ಒಂದೇ ವಾರದಲ್ಲಿ ಪ್ರಧಾನಿ ಮೋದಿ ಅವರ ಖಾತೆಗೆ 4 ಮಿಲಿಯನ್ (40 ಲಕ್ಷ) ಹೊಸ ಫಾಲೋವರ್ಸ್‌ಗಳು ಸೇರ್ಪಡೆಯಾಗಿದ್ದಾರೆ.
ಫಾಲೋವರ್ಸ್ ಏರಿಕೆಗೆ ಪ್ರಮುಖ ಕಾರಣವೇನು?
ದೇಶಾದ್ಯಂತ ನಡೆಯುತ್ತಿರುವ ನೀಟ್ ಯುಜಿ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ‘ಜೆನ್ ಝಿ’ಗಳು (Gen Z) ನಡೆಸುತ್ತಿದ್ದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ‘ಸೆಲ್ಫಿ ವೀಡಿಯೊ’ ಮಾದರಿಯಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಬಿಡುಗಡೆ ಮಾಡಿದ್ದರು.
ಫ್ರೆಂಡ್ಸ್ ಎಂದು ಆತ್ಮೀಯವಾಗಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಈ ವೀಡಿಯೊದಲ್ಲಿ, ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕಾನೂನು ತರುವುದು ಹಾಗೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದರು. ಈ ವೀಡಿಯೊ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 300 ಮಿಲಿಯನ್‌ಗಿಂತಲೂ (30 ಕೋಟಿ) ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಇನ್‌ಸ್ಟಾಗ್ರಾಂ ಇತಿಹಾಸದಲ್ಲೇ ಭಾರಿ ಸದ್ದು ಮಾಡಿತು. ಇದರಿಂದಾಗಿ ಲಕ್ಷಾಂತರ ಯುವಕರು ಒಂದೇ ರಾತ್ರಿಯಲ್ಲಿ ಮೋದಿಯವರ ಖಾತೆಯನ್ನು ಫಾಲೋ ಮಾಡಲು ಪ್ರಾರಂಭಿಸಿದರು.
ಮತ್ತಷ್ಟು ಓದಿ: ಮೋದಿ ವಿಡಿಯೋ ಡಿಲೀಟ್, ಮೆಟಾ ಸಂಸ್ಥೆಯ ಗ್ಲೋಬಲ್ ಪಬ್ಲಿಕ್ ಪಾಲಿಸಿ ಹೆಡ್‌ಗೆ ಸಮನ್ಸ್: ‘ಮೆಟಾ’ ವಿವರಣೆಗೆ ಕೇಂದ್ರ ಅಸಮಾಧಾನ
ಇನ್‌ಸ್ಟಾಗ್ರಾಂನಲ್ಲಿ ವಿಶ್ವದ ಯಾವುದೇ ರಾಜಕೀಯ ನಾಯಕನಿಗಿಂತ ಮೋದಿ ಅತ್ಯಂತ ಮುಂಚೂಣಿಯಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 43.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದು, ಅವರಿಗಿಂತ ಮೋದಿ ಅವರ ಫಾಲೋವರ್ಸ್ ಸಂಖ್ಯೆ ದುಪ್ಪಟ್ಟು ಅಧಿಕವಾಗಿದೆ.
ಭಾರತೀಯ ರಾಜಕಾರಣದಲ್ಲಿ ಭಾರಿ ಅಂತರ: ಭಾರತದ ಇತರ ಪ್ರಮುಖ ರಾಜಕಾರಣಿಗಳಾದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (16.1 ಮಿಲಿಯನ್) ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (12.6 ಮಿಲಿಯನ್) ಅವರಿಗಿಂತ ಮೋದಿ ಮುಂಚೂಣಿಯಲ್ಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
