ಬೆಂಗಳೂರು, ಜೂನ್ 21: ಕೇರಳ ಮೂಲದ ಉದ್ಯಮಿಯನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂ ದರೋಡೆ (Cop Robbery Case) ಮಾಡಿದ ಸಿಐಡಿ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿಯನ್ನು (Mahesh Kanakagiri) ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಮಹೇಶ್ ಕನಕಗಿರಿಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜಾಗ ಒತ್ತುವರಿ ಮಾಡಲು ಭೂಗಳ್ಳರಿಗೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿಧಾನ ಪರಿಷತ್ ಸುಳ್ಳು ಮಾಹಿತಿ ನೀಡಿದ್ದರು.
ಮುಖ್ಯಾಂಶಗಳು
- ಇಂಡಿಯನ್ ಆಯಿಲ್ ಜಾಗ ಒತ್ತುವರಿಯಲ್ಲಿ ಇನ್ಸ್‌ಪೆಕ್ಟರ್ ಕನಕಗಿರಿ ಕೈವಾಡ
- ವಿಧಾನ ಪರಿಷತ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದ ಆರೋಪಿ
- ಭೂಗಳ್ಳರಿಗೆ ಸಾಥ್ ನೀಡಿದ ಮಹೇಶ್ ಕನಕಗಿರಿ
ಭೂಗಳ್ಳರಿಗೆ ಸಾಥ್
ಮಾಜಿ ಕಾರ್ಪೊರೇಟರ್ ಮೋಹನ್ ರಾಜ್ ಮತ್ತಿತರಿಗೆ ಮಹೇಶ್ ಕನಕಗಿರಿ ಸಾಥ್ ನೀಡಿದ್ದರು. ಇಂಡಿಯನ್ ಆಯಿಲ್ ಕಾರ್ಪೊರೇಷನ್ 1 ಕೋಟಿ 53 ಲಕ್ಷ ರೂ ಹಣ ನೀಡಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಬಿಡಿಎಯಿಂದ ಸಿಎ ನಿವೇಶನ ಖರೀದಿಸಿದ್ದರು. ಆದರೆ ರಿಸರ್ವ್ ಪೊಲೀಸ್ ಭದ್ರತೆಯಲ್ಲಿ ಜಾಗಕ್ಕೆ ಭೇಟಿ ನೀಡಿದ್ದ ಮಹೇಶ್ ಕನಕಗಿರಿ ಪೆಟ್ರೋಲ್ ಪಂಪ್ ಅಳವಡಿಸಿದ್ದರೂ ಡ್ಯಾಮೇಜ್ ಮಾಡಿ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ: ಪೊಲೀಸ್ ಜೀಪ್‌ನಲ್ಲೇ ಬಂದು ದರೋಡೆ! ಕೇರಳ ಉದ್ಯಮಿಗಳಿಗೆ 20 ಲಕ್ಷ ರೂ. ಪಂಗನಾಮ ಹಾಕಿದ ಸಿಐಡಿ ಇನ್ಸ್‌ಪೆಕ್ಟರ್
ಇನ್ನು ಮಹೇಶ್ ಕನಕಗಿರಿ ಡಿಸೆಂಬರ್ 2023ರಲ್ಲಿ ವಿಧಾನ ಪರಿಷತ್ ಅಧಿವೇಶನದಲ್ಲಿ ಸುಳ್ಳು ಮಾಹಿತಿ ನೀಡಿದ್ದರು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜಾಗ ಸಂಬಂಧ ಹೈಕೋರ್ಟ್ ಕೇಸ್ ಇದೆ ಎಂದು ತಪ್ಪು ಮಾಹಿತಿ ನೀಡಿದ್ದರು. ಆ ಮೂಲಕ ಗೃಹ ಸಚಿವರಿಂದ ಅಧಿವೇಶದಲ್ಲಿ ತಪ್ಪು ಮಾಹಿತಿ ರವಾನೆ ಆಗಿತ್ತು.
ಪ್ರಕರಣ ಹಿನ್ನೆಲೆ
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಕೇರಳಂ ಮೂಲದ ಉದ್ಯಮಿಯೊಬ್ಬರು ಸಾಕಷ್ಟು ಹಣದೊಂದಿಗೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್‌ಗೆ ಬಂದಿದ್ದರು. ಇದಕ್ಕೆ ಹೊಂಚು ಹಾಕಿ ಕೂತು ಅಲ್ಲಿಗೆ ಎಂಟ್ರಿ ಕೊಟ್ಟಿದ್ದು ಬೇರೆ ಯಾರು ಅಲ್ಲ, ಖುದ್ದು ಸಿಐಡಿ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಮತ್ತವರ ಗ್ಯಾಂಗ್.
ಇದನ್ನೂ ಓದಿ: ದರೋಡೆ ಪ್ರಕರಣ: ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನ; ಸವಾಲಾದ ವಿಚಾರಣೆ
ಇನ್ಸ್ಪೆಕ್ಟರ್ ಸೂಚನೆಯಂತೆ ಕುಪೇಂದ್ರ ಮತ್ತು ಕುಮಾರ್ ಹೋಟೆಲ್ ರೂಮ್‌ಗೆ ನುಗ್ಗಿದ್ದಾರೆ. ನಾವು ಪೊಲೀಸರು, ನೀವು ಮನಿ ಟ್ರೇಡಿಂಗ್ ಕಳ್ಳದಂಧೆ ಮಾಡುತ್ತಿದ್ದೀರಾ ಎಂದು ಹೆದರಿಸಿ, ಐಡಿ ಕಾರ್ಡ್ ತೋರಿಸಿ ಅರೆಸ್ಟ್ ಮಾಡುವುದಾಗಿ ಹೇಳಿದ್ದಾರೆ. ಉದ್ಯಮಿ ಹಣ ಕೊಡಲು ನಿರಾಕರಿಸಿದಾಗ, ಮೇಲೆ ಹಲ್ಲೆ ನಡೆಸಿ 20 ಲಕ್ಷ ರೂ ದರೋಡೆ ಮಾಡಿ ಪರಾರಿಯಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
