ವಾಷಿಂಗ್ಟನ್ , ಏಪ್ರಿಲ್ 22: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಬಿಗುವಿನ ವಾತಾವರಣದ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿರುವ ಟ್ರಂಪ್, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಸ್ಫೋಟಕ ಹಂತ ತಲುಪಿರುವಾಗಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ನಾಯಕರ ವಿಶೇಷ ವಿನಂತಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ರಾಜತಾಂತ್ರಿಕ ನಡೆ
ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್ಫಾರ್ಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಮತ್ತು ಶೆಹಬಾಜ್ ಷರೀಫ್ ಅವರು ಅಮೆರಿಕವನ್ನು ಸಂಪರ್ಕಿಸಿ ಮಾತುಕತೆಗೆ ಸಮಯ ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಇರಾನ್ ನಾಯಕರು ಮತ್ತು ಪ್ರತಿನಿಧಿಗಳು ಒಂದು ಏಕೀಕೃತ ಪ್ರಸ್ತಾಪವನ್ನು ಮಂಡಿಸುವವರೆಗೆ ದಾಳಿಯನ್ನು ತಡೆ ಹಿಡಿಯುವಂತೆ ಪಾಕಿಸ್ತಾನ ಮನವಿ ಮಾಡಿದೆ. ಅವರ ಪ್ರಸ್ತಾಪ ಬರುವವರೆಗೆ ಮತ್ತು ಚಚರ್ಚಗಳು ತಾರ್ಕಿಕ ಅಂತ್ಯ ಕಾಣುವವರೆಗೆ ತಾವು ಕದನ ವಿರಾಮ ವಿಸ್ತರಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ: ಟ್ರಂಪ್ ಅವರ ದಿಗ್ಬಂಧನ ತಂತ್ರ
ಜಾಗತಿಕ ತೈಲ ವ್ಯಾಪಾರದ ನಾಡಿಮಿಡಿತವಾಗಿರುವ ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಟ್ರಂಪ್ ಅತ್ಯಂತ ಕಠಿಣ ನಿಲುವು ತಳೆದಿದ್ದಾರೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿದ್ದರೆ ಇರಾನ್ ದಿನಕ್ಕೆ ಸುಮಾರು 500 ಮಿಲಿಯನ್ ಡಾಲರ್ ಆದಾಯ ಗಳಿಸುತ್ತದೆ. ಆದರೆ ಅಮೆರಿಕದ ನೌಕಾಪಡೆಯು ಈ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವುದರಿಂದ ಇರಾನ್ ಆರ್ಥಿಕವಾಗಿ ಕಂಗೆಟ್ಟಿದೆ.
ಇರಾನ್ ಈ ಜಲಸಂಧಿಯನ್ನು ತಾನೇ ಮುಚ್ಚುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಟ್ರಂಪ್ ಪ್ರಕಾರ, ಇದು ಕೇವಲ ತನ್ನ ಮರ್ಯಾದೆ ಉಳಿಸಿಕೊಳ್ಳಲು ಇರಾನ್ ಮಾಡುತ್ತಿರುವ ನಾಟಕ. ಅಮೆರಿಕ ಈಗಾಗಲೇ ಅದನ್ನು ಮುಚ್ಚಿರುವುದರಿಂದ ಇರಾನ್ ಅಸಹಾಯಕವಾಗಿದೆ.
ಮತ್ತಷ್ಟು ಓದಿ: ನನ್ನಿಂದ ಖುಷಿಯಾಗಿರುವ ಚೀನಾದ ಅಧ್ಯಕ್ಷ ಬಿಗಿ ಅಪ್ಪುಗೆ ನೀಡುತ್ತಾರೆ; ಟ್ರಂಪ್
ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಮೊದಲ ಹಂತದ ಕದನ ವಿರಾಮ ಬುಧವಾರಕ್ಕೆ ಅಂತ್ಯಗೊಂಡಿತ್ತು. ಎರಡನೇ ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡದೆ ಸ್ಥಗಿತಗೊಂಡಿದ್ದವು. ಟ್ರಂಪ್ ಮೊದಲು ಕದನ ವಿರಾಮ ವಿಸ್ತರಣೆ ನಿರಾಕರಿಸಿದ್ದರೂ, ಕೊನೆಯ ಕ್ಷಣದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಮನಸ್ಸು ಬದಲಿಸಿದ್ದಾರೆ. ಆದರೂ ಅಮರಿಕ ಸೇನೆಗೆ ಯಾವುದೇ ಕ್ಷಣದಲ್ಲಿ ದಾಳಿಗೆ ಸಿದ್ದರಾಗಿರಿ ಎಂದು ಅವರು ಆದೇಶಿಸಿದ್ದಾರೆ.
ಮುಂದಿನ ಹಾದಿ ಕಠಿಣ
ಈ ಕದನ ವಿರಾಮ ವಿಸ್ತರಣೆಯು ತಾತ್ಕಾಲಿಕವಾಗಿದ್ದು, ಇರಾನ್ ಮಂಡಿಸುವ ಪ್ರಸ್ತಾಪದ ಮೇಲೆ ಎಲ್ಲವೂ ನಿರ್ಧರಿತವಾಗಲಿದೆ. ಒಂದೋ ಒಪ್ಪಂದವಾಗಬೇಕು, ಇಲ್ಲದಿದ್ದರೆ ಇರಾನ್ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ. ಟ್ರಂಪ್ ಅವರ ಈ ನಡೆ ಇರಾನ್ ಸರ್ಕಾರವನ್ನು ಆರ್ಥಿಕವಾಗಿ ಹೈರಾಣಾಗಿಸಿ, ಅವರನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡುವ ತಂತ್ರದ ಭಾಗವಾಗಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
