ಇಸ್ರೇಲ್ ಸೇನೆಯ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿ; ಶರಣಾದರೂ ಕಾರಿನ ಮೇಲೆ ಶೂಟಿಂಗ್ – Kannada News

ಜೆರುಸಲೇಂ, ಜೂನ್ 6: ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ (Israel) ಸೇನೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ ಸೇನೆಯು ಕುಟುಂಬವೊಂದು ಚಲಾಯಿಸುತ್ತಿದ್ದ ವಾಹನದ ಮೇಲೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿದೆ ಎಂದು ಮಗುವಿನ ಕುಟುಂಬಸ್ಥರು ಮತ್ತು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಶಿಶುವನ್ನು ಸ್ಯಾಮ್ ಫಹದ್ ಅಬು ಹೈಕಲ್ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಈ ಘಟನೆಯಲ್ಲಿ ಮಗುವಿನ ಪೋಷಕರಿಗೂ ಗಾಯಗಳಾಗಿವೆ.

ಆ ಪ್ರದೇಶದಲ್ಲಿದ್ದ ಶಸ್ತ್ರಸಜ್ಜಿತ ಉಗ್ರಗಾಮಿಗಳನ್ನು ಗುರಿಯಾಗಿಸಿ ಸೇನೆ ಗುಂಡು ಹಾರಿಸಿತ್ತು. ಆದರೆ, ಮಗುವಿನ ಮೇಲಿನ ದಾಳಿಯು ಉದ್ದೇಶಪೂರ್ವಕವಾಗಿರಲಿಲ್ಲ, ಅದು ಆಕಸ್ಮಿಕವಾಗಿ ನಡೆದಿದೆ ಎಂದು ಸೇನೆ ಸಮರ್ಥಿಸಿಕೊಂಡಿದೆ. ಮಗುವಿನ ಸಾವಿಗೆ ಕಾರಣವಾದ ನಿಖರವಾದ ಸನ್ನಿವೇಶಗಳನ್ನು ಮತ್ತು ಸೇನಾ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಮಿಲಿಟರಿ ಪೊಲೀಸರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ ಎಂದು ಐಡಿಎಫ್ ತಿಳಿಸಿದೆ.

ಇದನ್ನೂ ಓದಿ: ವಿಶ್ವ ಶಾಂತಿಗೆ ಬಿಗ್ ಬೂಸ್ಟ್: ಇಸ್ರೇಲ್-ಲೆಬನಾನ್ ಕದನ ವಿರಾಮಕ್ಕೆ ಒಪ್ಪಿಗೆ, ಇರಾನ್ ಮಾತುಕತೆಗೂ ಮುಕ್ತವಾದ ಹಾದಿ

ಮಗುವಿನ ಕುಟುಂಬದ ಸದಸ್ಯರ ಪ್ರಕಾರ, ಹೆಬ್ರಾನ್‌ನ ‘ಟೆಲ್ ರುಮೇಡಾ’ ಎಂಬ ಪ್ರದೇಶದಲ್ಲಿ ಇಸ್ರೇಲ್ ಸೈನಿಕರು ಇವರ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಈ ಘಟನೆ ನಡೆದಿದೆ. ಬೆತ್ಲೆಹೆಮ್ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿರುವ ಮಗುವಿನ ತಂದೆ ಫಹದ್ ಅಬು ಹೈಕಲ್ ಅವರು ಇಸ್ರೇಲಿ ಪತ್ರಿಕೆ ‘ಹಾ ರೆಟ್ಜ್’ ಜೊತೆ ಮಾತನಾಡಿ, ತಾವು ಸೈನಿಕರ ಎಲ್ಲಾ ಸೂಚನೆಗಳನ್ನು ಪಾಲಿಸಿದ್ದರೂ ತಮ್ಮ ಮೇಲೆ ಗುಂಡು ಹಾರಿಸಲಾಯಿತು ಎಂದು ಆರೋಪಿಸಿದ್ದಾರೆ.

“ಸೈನಿಕರು ಕಾರನ್ನು ನಿಲ್ಲಿಸುವಂತೆ ನನಗೆ ಸನ್ನೆ ಮಾಡಿದರು. ನಾನು ಕಾರನ್ನು ಸಂಪೂರ್ಣವಾಗಿ ನಿಲ್ಲಿಸಿ, ನನ್ನ ಎರಡೂ ಕೈಗಳನ್ನು ಸ್ಟೀರಿಂಗ್ ವೀಲ್ ಮೇಲೆ ಎತ್ತಿಟ್ಟೆ. ಆದರೆ ಅದರ ಬೆನ್ನಲ್ಲೇ ಅವರು ತಕ್ಷಣವೇ ವಾಹನದ ಮೇಲೆ ಗುಂಡಿನ ಮಳೆಗರೆದರು. ಗುಂಡು ಮೊದಲು ತಮ್ಮ ಕೈಗೆ ತಗುಲಿ, ನಂತರ ಕಾರಿನ ಹಿಂಬದಿಯ ಸೀಟಿನಲ್ಲಿ ತಾಯಿಯೊಂದಿಗೆ ಕುಳಿತಿದ್ದ ತಮ್ಮ 7 ತಿಂಗಳ ಮಗುವಿಗೆ ತಗುಲಿತು ಎಂದು ಅಬು ಹೈಕಲ್ ಹೇಳಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್, ಲೆಬನಾನ್ 10 ದಿನಗಳ ಕದನವಿರಾಮಕ್ಕೆ ಒಪ್ಪಿಕೊಂಡಿವೆ; ಟ್ರಂಪ್ ಘೋಷಣೆ

ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಮತ್ತು ಸ್ಥಳೀಯ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿರಪರಾಧಿ ಮಕ್ಕಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ನಡೆಸುತ್ತಿರುವ ಅಮಾನವೀಯ ದಾಳಿಗಳಿಗೆ ಇದು ಮತ್ತೊಂದು ಸಾಕ್ಷಿ ಎಂದು ಅವರು ಆಪಾದಿಸಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಮಧ್ಯಪ್ರವೇಶಿಸಿ ವೆಸ್ಟ್ ಬ್ಯಾಂಕ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ನೂರಾರು ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *