ನವದೆಹಲಿ, ಜುಲೈ 16: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ ಸೇರಿದಂತೆ ಹಲವು ಉಪಗ್ರಹ ಉಡಾವಣೆಗಳ ಯಶಸ್ಸಿಗಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಆದರೆ ಇಂತಹ ನಿರ್ಣಾಯಕ ಘಟ್ಟದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಒಳಗೆ ಭಾರಿ ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಇಸ್ರೋ(ISRO)ದ ಕನಿಷ್ಠ 100 ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದು, ಸಂಸ್ಥೆಗೆ ಭಾರಿ ಹಿನ್ನಡೆ ತಂದಿದೆ.
ಅನುಭವಿ ವಿಜ್ಞಾನಿಗಳ ಈ ದಿಢೀರ್ ಹೊರಹರಿವನ್ನು ತಡೆಯಲು ಎಚ್ಚೆತ್ತುಕೊಂಡಿರುವ ಕೇಂದ್ರ ಬಾಹ್ಯಾಕಾಶ ಇಲಾಖೆಯು (DoS) ಜುಲೈ 14 ರಂದು ಹೊಸ ಆಂತರಿಕ ಜ್ಞಾಪಕ ಪತ್ರವನ್ನು ಹೊರಡಿಸಿದ್ದು, ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂಪ್ರೇರಿತ ನಿವೃತ್ತಿ (VRS) ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ.
ಇನ್ಮುಂದೆ ರಾಜೀನಾಮೆ ಅಷ್ಟು ಸುಲಭವಲ್ಲ
ಇಷ್ಟು ದಿನ ಇಸ್ರೋದ ವಿವಿಧ ಕೇಂದ್ರಗಳ ನಿರ್ದೇಶಕರು ತಮ್ಮ ವ್ಯಾಪ್ತಿಯ ವಿಜ್ಞಾನಿಗಳ ರಾಜೀನಾಮೆ ಅಥವಾ ವಿಆರ್ಎಸ್ ವಿನಂತಿಗಳನ್ನು ಪರಿಶೀಲಿಸಿ ಸುಲಭವಾಗಿ ಅಂಗೀಕರಿಸುವ ಅಧಿಕಾರ ಹೊಂದಿದ್ದರು. ಆದರೆ ಹೊಸ ನಿಯಮಗಳ ಪ್ರಕಾರ ಈ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ.
ಕೇಂದ್ರೀಕೃತ ವ್ಯವಸ್ಥೆ: ಗಗನಯಾನದಂತಹ ದೇಶದ ಪ್ರಮುಖ ಕಾರ್ಯಾಚರಣೆಗಳಲ್ಲಿ ತೊಡಗಿರುವ ‘ಗ್ರೂಪ್ ಎ’ ದರ್ಜೆಯ ತಾಂತ್ರಿಕ ಮತ್ತು ವೈಜ್ಞಾನಿಕ ಸಿಬ್ಬಂದಿಯ ರಾಜೀನಾಮೆಗಳನ್ನು ಇನ್ಮುಂದೆ ಸ್ಥಳೀಯವಾಗಿ ಸ್ವೀಕರಿಸುವಂತಿಲ್ಲ.
ದೆಹಲಿ ಮಟ್ಟದಲ್ಲಿ ಪರಿಶೀಲನೆ: ಎಲ್ಲಾ ರಾಜೀನಾಮೆ ಅರ್ಜಿಗಳನ್ನು ನೇರವಾಗಿ ದೆಹಲಿಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಉನ್ನತ ಮಟ್ಟದ ಸಮಿತಿಯೇ ಸೂಕ್ಷ್ಮವಾಗಿ ಪರಿಶೀಲಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಮತ್ತಷ್ಟು ಓದಿ:ISRO SAC Recruitment 2026: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ
ಯಾವುದೇ ಮುನ್ಸೂಚನೆಯಿಲ್ಲದೆ ವಿಜ್ಞಾನಿಗಳು ಹೊರನಡೆದರೆ, ಆ ಜಾಗಕ್ಕೆ ತಕ್ಷಣವೇ ಮತ್ತೊಬ್ಬರನ್ನು ತರುವುದು ಅಸಾಧ್ಯ. ಏಕೆಂದರೆ ಬಾಹ್ಯಾಕಾಶ ವಿಜ್ಞಾನದಲ್ಲಿ ಪ್ರತಿಯೊಬ್ಬ ವಿಜ್ಞಾನಿಯ ಪರಿಣತಿಯೂ ಅತ್ಯಂತ ವಿಶಿಷ್ಟವಾದುದು. ಈ ಹಠಾತ್ ನಿರ್ಗಮನ ದೇಶದ ಕೋಟ್ಯಂತರ ರೂಪಾಯಿಗಳ ಯೋಜನೆಗಳ ಗಡುವನ್ನು ವಿಸ್ತರಿಸುವಂತೆ ಮಾಡುತ್ತಿವೆ ಎಂಬುದು ಸರ್ಕಾರದ ಕಳವಳವಾಗಿದೆ.
ವಿಜ್ಞಾನಿಗಳು ಇಸ್ರೋ ತೊರೆಯುತ್ತಿರುವುದಕ್ಕೆ ಅಸಲಿ ಕಾರಣವೇನು?
ಸರ್ಕಾರ ಅಥವಾ ಇಸ್ರೋ ಈ ವಲಸೆಗೆ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲವಾದರೂ, ತಜ್ಞರ ಪ್ರಕಾರ ಇದಕ್ಕೆ ಮುಖ್ಯ ಕಾರಣ ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮದ ಭಾರಿ ಬೆಳವಣಿಗೆ ಎಂದು ಹೇಳುತ್ತಿದ್ದಾರೆ.
ಖಾಸಗಿ ಸ್ಟಾರ್ಟ್ಅಪ್ಗಳ ಆಕರ್ಷಣೆ: ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದೆ. ಸ್ಕೈರೂಟ್ (Skyroot), ಅಗ್ನಿಕುಲ್ (Agnikul) ನಂತಹ ನೂರಾರು ನವೋದ್ಯಮಗಳು ಕೋಟ್ಯಂತರ ರೂಪಾಯಿ ಬಂಡವಾಳದೊಂದಿಗೆ ಭಾರತದಲ್ಲಿ ತಲೆಯೆತ್ತಿವೆ. ಈ ಖಾಸಗಿ ಕಂಪನಿಗಳು ಇಸ್ರೋದ ಅನುಭವಿ ವಿಜ್ಞಾನಿಗಳಿಗೆ ಭಾರಿ ಸಂಬಳ ಹಾಗೂ ಉನ್ನತ ನಾಯಕತ್ವದ ಹುದ್ದೆಗಳ ಆಮಿಷ ಒಡ್ಡಿ ತಮ್ಮತ್ತ ಸೆಳೆಯುತ್ತಿವೆ.
ಸಾಂಸ್ಥಿಕ ಒತ್ತಡ: ಕೇವಲ ಸಂಬಳವಷ್ಟೇ ಅಲ್ಲದೆ, ಇಸ್ರೋದಲ್ಲಿನ ವೃತ್ತಿಜೀವನದ ಬೆಳವಣಿಗೆಯ ಮಂದಗತಿ, ಅತಿಯಾದ ಆಡಳಿತಾತ್ಮಕ ಒತ್ತಡ ಹಾಗೂ ಮುಕ್ತ ಕೆಲಸದ ಸಂಸ್ಕೃತಿಯ ಕೊರತೆಯೂ ವಿಜ್ಞಾನಿಗಳನ್ನು ಹೊರಹೋಗುವಂತೆ ಪ್ರೇರೇಪಿಸುತ್ತಿದೆ ಎಂದು ಇಸ್ರೋದ ಮಾಜಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಕೇವಲ ಕಠಿಣ ನಿಯಮಗಳನ್ನು ತಂದು ವಿಜ್ಞಾನಿಗಳನ್ನು ಕಟ್ಟಿಹಾಕಲು ಸಾಧ್ಯವಿಲ್ಲ, ಬದಲಿಗೆ ಅವರಿಗೆ ಸೂಕ್ತ ಪ್ರೇರಣೆ ನೀಡಬೇಕು ಎಂಬುದು ಅವರ ವಾದ.
ಇಸ್ರೋದಲ್ಲಿ ಇಂತಹ ಪ್ರತಿಭಾ ಪಲಾಯನ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಸಲ್ಲಿಕೆಯಾಗಿದ್ದ ಆರ್ಟಿಐ (RTI) ವರದಿಯೊಂದರ ಪ್ರಕಾರ, 2012 ರಿಂದ 2017 ರ ನಡುವಿನ ಕೇವಲ ಐದು ವರ್ಷಗಳ ಅವಧಿಯಲ್ಲೇ ಸುಮಾರು 300 ಕ್ಕೂ ಹೆಚ್ಚು ನುರಿತ ವಿಜ್ಞಾನಿಗಳು ಇಸ್ರೋ ಸಂಸ್ಥೆಯನ್ನು ತೊರೆದಿದ್ದರು.
ಆದರೆ, ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಭಾರಿ ವ್ಯತ್ಯಾಸವಿದೆ. ಹಿಂದೆ ಭಾರತ ಕೇವಲ ಉಪಗ್ರಹಗಳನ್ನು ಉಡಾಯಿಸುತ್ತಿತ್ತು. ಆದರೆ ಇಂದು ಗಗನಯಾನದ ಮೂಲಕ ಭಾರತೀಯರನ್ನು ಸ್ವದೇಶಿ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸುವ ಹಾಗೂ ಚಂದ್ರ, ಮಂಗಳ ಗ್ರಹಗಳ ಅನ್ವೇಷಣೆಯ ಅತ್ಯಂತ ಜವಾಬ್ದಾರಿಯುತ ಹಂತದಲ್ಲಿದೆ. ಇಂತಹ ಸಮಯದಲ್ಲಿ ಅನುಭವಿ ತಜ್ಞರ ಜ್ಞಾನವನ್ನು ಸಂಸ್ಥೆಯೊಳಗೆ ಉಳಿಸಿಕೊಳ್ಳುವುದು ಭಾರತದ ಜಾಗತಿಕ ಪ್ರತಿಷ್ಠೆಯ ದೃಷ್ಟಿಯಿಂದ ಅತ್ಯಂತ ಕಡ್ಡಾಯವಾಗಿದೆ. ಸರ್ಕಾರದ ಈ ಹೊಸ ‘ಬಿಗಿ ನೀತಿ’ ವಿಜ್ಞಾನಿಗಳ ವಲಸೆಯನ್ನು ತಡೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:38 am, Thu, 16 July 26