ನಿವೃತ್ತಿಗೆ 15 ದಿನ ಬಾಕಿ ಇರುವಾಗಲೇ ಕೆಆರ್ಡಿಎಲ್ ಇಂಜಿನಿಯರ್ ಬಂಧನImage Credit source: tv9
ಕೊಪ್ಪಳ, ಜುಲೈ 16: ಕೊಪ್ಪಳ (Koppal) ಜಿಲ್ಲೆಯಲ್ಲಿ ಸುಮಾರು ಐದು ವರ್ಷಗಳ ಹಿಂದೆ ನಡೆದಿದ್ದ ಎನ್ನಲಾದ 72 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಕೆಆರ್ಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ) ಕಾರ್ಯನಿರ್ವಾಹಕ ಇಂಜಿನಿಯರ್ ಝಡ್.ಎಂ. ಚಿಂಚೋಳ್ಕರ್ ಹಾಗೂ ಗುತ್ತಿಗೆದಾರ ದೇವರಾಜ್ ಅವರನ್ನು ಬಂಧಿಸಲಾಗಿದೆ. ನಿವೃತ್ತಿಗೆ ಕೇವಲ 15 ದಿನ ಬಾಕಿ ಇರುವಾಗಲೇ ಅಧಿಕಾರಿಯ ಬಂಧನ ಆಗಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ಬಂದಿದೆ.
ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದವು ಹಲವು ದೂರು
ಲಭ್ಯ ಮಾಹಿತಿಯ ಪ್ರಕಾರ, 339 ಕಾಮಗಾರಿಗಳನ್ನು ಕೈಗೊಳ್ಳದೆ ನಕಲಿ ಬಿಲ್ಗಳನ್ನು ಸೃಷ್ಟಿಸಿ ಸುಮಾರು 72 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಪ್ರಕರಣದ ಕೇಂದ್ರಬಿಂದುವಾಗಿದೆ. ಈ ಸಂಬಂಧ ಲೋಕಾಯುಕ್ತಕ್ಕೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಅಧಿಕಾರಿಗಳು ಆರೋಪಗಳಿಗೆ ಪೂರಕ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಬಂಧನದ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿದ್ದ ಕಾರ್ಯನಿರ್ವಾಹಕ ಇಂಜಿನಿಯರ್ ಝಡ್.ಎಂ. ಚಿಂಚೋಳ್ಕರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಗುತ್ತಿಗೆದಾರ ದೇವರಾಜ್ ಅವರನ್ನೂ ಬಂಧಿಸಲಾಗಿದೆ.
ಕಾಮಗಾರಿ ನಡೆಸದೆ ಬಿಲ್ ಸಲ್ಲಿಸಿ ಹಣ ಪಡೆದ ಆರೋಪ
ಕಾಮಗಾರಿ ನಡೆಸದೆ ಬಿಲ್ಗಳನ್ನು ಸಲ್ಲಿಸಿ ಹಣ ಪಡೆದಿರುವ ಆರೋಪದ ಜೊತೆಗೆ, ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಜಿಎಸ್ಟಿ ಹಣದ ದುರುಪಯೋಗ ಮಾಡಿರುವ ಆರೋಪವೂ ವ್ಯಕ್ತವಾಗಿತ್ತು. ಈ ಸಂಬಂಧವೂ ಲೋಕಾಯುಕ್ತದಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸೇವೆಯಿಂದ ವಜಾಗೊಂಡಿದ್ದ ಚಿಂಚೋಳ್ಕರ್
ಕಳೆದ ವರ್ಷವೇ ಚಿಂಚೋಳ್ಕರ್ ವಿರುದ್ಧ ಕೆಆರ್ಡಿಎಲ್ ಅಧಿಕಾರಿಗಳು ಹಾಗೂ ಇತರ ದೂರುದಾರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿಂದೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತಾದರೂ, ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದರು ಎಂದು ತಿಳಿದುಬಂದಿದೆ.
ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಅಗತ್ಯವಿದ್ದರೆ ಚಿಂಚೋಳ್ಕರ್ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ