Headlines

ರಾಯಚೂರಲ್ಲಿ ಖತರ್ನಾಕ್ ಬೈಕ್ ಮೆಕ್ಯಾನಿಕ್ ಗ್ಯಾಂಗ್ ಅರೆಸ್ಟ್: ನಂಬರ್ ಪ್ಲೇಟ್, ಚೆಸ್ಸಿ ಅಳಿಸಿ ಮಾರಾಟ ದಂಧೆ – Kannada News | Major Bike Theft Gang Uncovered in Raichur: 18 Stolen Vehicles Worth 17.3 Lakh Seized

ರಾಯಚೂರು, ಜು.16: ನಗರದ ಮಾಲ್‌ಗಳು ಹಾಗೂ ಜನದಟ್ಟಣೆಯ ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು, ಅವುಗಳ ಇಂಜಿನ್ ಹಾಗೂ ಚೆಸ್ಸಿ ನಂಬರ್‌ಗಳನ್ನು ಅಳಿಸಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಬೈಕ್ ಮೆಕ್ಯಾನಿಕ್ ಹಾಗೂ ಆತನ ಸಹಚರನನ್ನು ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇವಲ ಒಂದು ಬೈಕ್ ಪತ್ತೆ ಹಚ್ಚಲು ಹೋದ ಪೊಲೀಸರಿಗೆ ಬರೋಬ್ಬರಿ 18 ಬೈಕ್ ಕಳ್ಳತನದ ಸರಣಿ ಜಾಲ ಬಯಲಾಗಿರುವುದು ದೊಡ್ಡ ಯಶಸ್ಸು ತಂದುಕೊಟ್ಟಿದೆ. ಬಂಧಿತ ಆರೋಪಿಗಳನ್ನು ಬೈಕ್ ಮೆಕ್ಯಾನಿಕ್ ಇಮ್ರಾನ್ (26) ಹಾಗೂ ಗಾರೆ ಕೆಲಸ ಮಾಡುತ್ತಿದ್ದ ಆತನ ಸಹಚರ ಆಕಾಶ್ (20) ಎಂದು ಗುರುತಿಸಲಾಗಿದೆ. ನಗರದ ಪ್ರಸಿದ್ಧ ‘ಮ್ಯಾಕ್ಸ್’ ಬಟ್ಟೆ ಮಾಲ್ ಎದುರು ಸಾರ್ವಜನಿಕರೊಬ್ಬರು ನಿಲ್ಲಿಸಿದ್ದ ಬೈಕ್ ಅನ್ನು ಈ ಇಬ್ಬರು ಇತ್ತೀಚೆಗೆ ಕದ್ದಿದ್ದರು. ಈ ಕುರಿತು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬೈಕ್ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಇಮ್ರಾನ್ ಮತ್ತು ಆಕಾಶ್ ಸಿಕ್ಕಿಬಿದ್ದಿದ್ದಾರೆ. ಇವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಸರಣಿ ಬೈಕ್ ಕಳ್ಳತನದ ಜಾಲ ಬಯಲಾಗಿದೆ.

ಆರೋಪಿ ಇಮ್ರಾನ್ ಬೈಕ್ ಮೆಕ್ಯಾನಿಕ್ ಆಗಿದ್ದರಿಂದ ಆತನಿಗೆ ಬೈಕ್‌ಗಳನ್ನು ಕಳ್ಳತನ ಮಾಡುವ ಕೆಲಸ ಚೆನ್ನಾಗಿ ಗೊತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಹ್ಯಾಂಡಲ್ ಲಾಕ್ ಮುರಿದು ಸುಲಭವಾಗಿ ಬೈಕ್ ಕದಿಯುತ್ತಿದ್ದ ಈ ಇಬ್ಬರು, ತಕ್ಷಣವೇ ಆ ಬೈಕ್‌ಗಳನ್ನು ಗ್ಯಾರೇಜ್‌ಗೆ ತರುತ್ತಿದ್ದರು. ಪೊಲೀಸರು ಅಥವಾ ಮಾಲೀಕರು ಗುರುತಿಸಬಾರದು ಎಂಬ ಕಾರಣಕ್ಕೆ ಬೈಕ್‌ನ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದರಲ್ಲದೆ, ಮೆಕ್ಯಾನಿಕ್ ಉಪಕರಣಗಳನ್ನು ಬಳಸಿ ಬೈಕ್‌ನ ಮೇಲಿರುವ ಅಸಲಿ ಚೆಸ್ಸಿ ನಂಬರ್ ಹಾಗೂ ಇಂಜಿನ್ ನಂಬರ್‌ಗಳನ್ನೇ ಸಂಪೂರ್ಣವಾಗಿ ಅಳಿಸಿ ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳು ನೀಡಿದ ಮಹತ್ವದ ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬರೋಬ್ಬರಿ 17 ಲಕ್ಷದ 30 ಸಾವಿರ ರೂಪಾಯಿ ಮೌಲ್ಯದ 18 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ವಾಹನಗಳಲ್ಲಿ ದುಬಾರಿ ಬೆಲೆಯ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಹಾಗೂ ಪಲ್ಸರ್ ಬೈಕ್‌ಗಳು ಸೇರಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *