ಈಗಲೂ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ – Kannada News | India Remains Fastest Growing Economy: World Bank Report Highlights Strong GDP Growth

ನವದೆಹಲಿ, ಜೂನ್ 12: ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮತ್ತು ಸವಾಲುಗಳಿದ್ದರೂ, ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ (India’s GDP growth) ಮುಂದುವರಿಯಲಿದೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ‘ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ಸ್’ (World Bank Global Economic Prospects) ವರದಿ ತಿಳಿಸಿದೆ. ಭಾರತದ ಈ ಉತ್ತಮ ಬೆಳವಣಿಗೆಗೆ ಕೆಲ ಪ್ರಮುಖ ಕಾರಣಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಬ್ಯಾಂಕ್ ವರದಿಯಲ್ಲಿರುವ ಪ್ರಮುಖ 5 ಅಂಶಗಳು ಇಲ್ಲಿ ಪ್ರಸ್ತಾಪಿಸಲಾಗಿದೆ.

1) ಭಾರತವೇ ನಂಬರ್ ಒನ್ ಆರ್ಥಿಕತೆ

ಪ್ರಸಕ್ತ ಹಣಕಾಸು ವರ್ಷದಲ್ಲಿ (FY27) ಭಾರತದ ಆರ್ಥಿಕ ಬೆಳವಣಿಗೆಯ ದರವು (GDP) ಶೇಕಡಾ 6.6 ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಹೆಚ್ಚಿನ ಇಂಧನ ಬೆಲೆಗಳು ಮತ್ತು ಇತರ ಉತ್ಪಾದನಾ ವೆಚ್ಚಗಳಿಂದಾಗಿ ಇದು ಕಳೆದ ವರ್ಷದ ಬೆಳವಣಿಗೆಗಿಂತ (ಶೇ. 7.7) ಸ್ವಲ್ಪ ಕಡಿಮೆಯಾಗಿದ್ದರೂ, ಜಗತ್ತಿನ ಬೇರೆಲ್ಲಾ ಪ್ರಮುಖ ದೇಶಗಳಿಗಿಂತ ಭಾರತದ ಆರ್ಥಿಕ ಬೆಳವಣಿಗೆಯ ವೇಗವೇ ಹೆಚ್ಚಾಗಿರಲಿದೆ.

2) ಮತ್ತೆ ವೇಗ ಪಡೆದುಕೊಳ್ಳಲಿರುವ ಭಾರತದ ಆರ್ಥಿಕತೆ

ಪ್ರಸ್ತುತ ಕಂಡುಬರುತ್ತಿರುವ ಜಾಗತಿಕ ಮಂದಗತಿ ತಾತ್ಕಾಲಿಕವಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ (FY28) ಭಾರತದ ಆರ್ಥಿಕತೆಯು ಶೇಕಡಾ 7.2 ರಷ್ಟು ಪ್ರಗತಿ ಸಾಧಿಸುವ ಮೂಲಕ ಮತ್ತೆ ಚೇತರಿಸಿಕೊಳ್ಳಲಿದೆ. ದೇಶೀಯ ಬೇಡಿಕೆ ಮತ್ತು ರಫ್ತು ವಲಯದಲ್ಲಿನ ಸುಧಾರಣೆ ಇದಕ್ಕೆ ಕಾರಣವಾಗಲಿದೆ.

ಇದನ್ನೂ ಓದಿ: ಡಾಲರ್ ಎದುರು ರುಪಾಯಿ ಮೌಲ್ಯ 67 ಪೈಸೆ ಜಿಗಿತ; 10 ದಿನದಲ್ಲಿ 100 ಪೈಸೆ ಮೌಲ್ಯ ಹೆಚ್ಚಳ

3) ದೇಶೀಯ ಬೇಡಿಕೆಯು ಆರ್ಥಿಕತೆಗೆ ಬಲ

ದೇಶದೊಳಗಿನ ಆರ್ಥಿಕ ಚಟುವಟಿಕೆಗಳು ಉತ್ತಮವಾಗಿವೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಜನರ ವೈಯಕ್ತಿಕ ಬಳಕೆ ಮತ್ತು ಖರೀದಿ ಸಾಮರ್ಥ್ಯ ಬಲವಾಗಿದೆ. ಜೊತೆಗೆ ನಗರ ಪ್ರದೇಶಗಳಲ್ಲೂ ಬೇಡಿಕೆ ಚೇತರಿಸಿಕೊಳ್ಳುತ್ತಿದ್ದು, ಇದು ಭಾರತದ ಆರ್ಥಿಕ ವಿಸ್ತರಣೆಗೆ ಪ್ರಮುಖ ಆಧಾರವಾಗಿದೆ.

4) ಗ್ರಾಹಕರಿಗೆ ನೆರವಾಗಲಿರುವ ಸರ್ಕಾರದ ನೀತಿಗಳು

ಸರಕು ಮತ್ತು ಸೇವಾ ತೆರಿಗೆ (GST) ದರಗಳಲ್ಲಿನ ಕಡಿತವು ಗ್ರಾಹಕರ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ವರದಿ ಹೇಳಿದೆ. ಇಂಧನ ತೆರಿಗೆ ಕಡಿತ ಸೇರಿದಂತೆ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಜನಸಾಮಾನ್ಯರಿಗೆ ಮತ್ತು ವ್ಯವಹಾರಗಳಿಗೆ ಸಹಕಾರಿಯಾಗಲಿವೆ.

5) ಮುಕ್ತ ವ್ಯಾಪಾರ ಒಪ್ಪಂದಗಳಿಂದ ರಫ್ತು ವಲಯಕ್ಕೆ ಲಾಭ

ಅಮೆರಿಕದ ಸುಂಕಗಳ ಕಡಿತ ಮತ್ತು ಹೊಸ ಮುಕ್ತ ವ್ಯಾಪಾರ ಒಪ್ಪಂದಗಳ (Free-Trade Agreements) ಅನುಷ್ಠಾನದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮಂದಗತಿಯಿದ್ದರೂ ಭಾರತದ ರಫ್ತು ವಲಯಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗುವುದಿಲ್ಲ. ಇದು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ.

ಇದನ್ನೂ ಓದಿ: ಕೀನಾ ಏರ್​ಪೋರ್ಟ್ ಗುತ್ತಿಗೆ: ಅದಾನಿಗೆ ಸಿಗಬೇಕಿದ್ದ ಗುತ್ತಿಗೆ ಚೀನೀ ಕಂಪನಿ ಪಾಲಾಯ್ತು

ಈ ಮೇಲಿನವು ವಿಶ್ವಬ್ಯಾಂಕ್​ನ ವರದಿಯಲ್ಲಿ ತಿಳಿಸಲಾದ ಕೆಲ ಪ್ರಮುಖ ವಿಚಾರಗಳಾಗಿವೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ, ಹೆಚ್ಚಿನ ಇಂಧನ ಬೆಲೆಗಳಂತಹ ಜಾಗತಿಕ ಸವಾಲುಗಳ ನಡುವೆಯೂ ಭಾರತದ ಬಲವಾದ ದೇಶೀಯ ಬಳಕೆ, ಸರ್ಕಾರದ ಆರ್ಥಿಕ ನೀತಿಗಳು ಮತ್ತು ವ್ಯಾಪಾರ ಅವಕಾಶಗಳು ದೇಶದ ಆರ್ಥಿಕತೆಯನ್ನು ಮುಂಚೂಣಿಯಲ್ಲಿಡಲಿವೆ ಎಂದು ಈ ವರದಿಯಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *