ಮಕರ ರಾಶಿಗೆ ಉತ್ತರಾಷಾಢ, ಶ್ರವಣ, ಧನಿಷ್ಠಾ ನಕ್ಷತ್ರಗಳು ಇರಲಿದ್ದು ಶ್ರವಣಾ ನಕ್ಷತ್ರಕ್ಕೆ ವಿಶೇಷ ಪರಿಣಾಮ ಬೀರಲಿದೆ. ಮೇ 2026ರಲ್ಲಿ ಮಕರ ರಾಶಿಯವರ ಗೋಚಾರ ಫಲ ಹಾಗೂ ಗ್ರಹಗತಿಗಳ ಪ್ರಭಾವದ ಹೀಗಿರಲಿದೆ.
ಗ್ರಹಗಳ ಸಂಚಾರ:
ಮಕರ ರಾಶಿಯವರಿಗೆ ಈ ತಿಂಗಳು ಗ್ರಹಗತಿಗಳು ಸವಾಲು ಮತ್ತು ಅವಕಾಶಗಳೆರಡನ್ನೂ ನೀಡುತ್ತಿವೆ. ಗುರುವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿರುವುದು ಅಷ್ಟೊಂದು ಶುಭಕರವಲ್ಲ. ಶತ್ರುಗಳ ಕಾಟ ಅಥವಾ ಸಾಲದ ಸುಳಿ ಕಂಡುಬರಬಹುದು.
- ರವಿ ದಶೆ: ನಾಲ್ಕನೇ ಮನೆಯಲ್ಲಿ ರವಿ ಇರುವುದು ಸುಖಸ್ಥಾನಕ್ಕೆ ಕಿರಿಕಿರಿ ಉಂಟುಮಾಡಬಹುದು.
- ಶುಕ್ರ ದಶೆ: ಐದನೇ ಮನೆಯಲ್ಲಿ ಶುಕ್ರ ಇರುವುದು ಅತ್ಯಂತ ಶುಭ. ಇದು ಪ್ರೇಮ, ಕಲೆ ಮತ್ತು ಸಂತಾನ ಸುಖಕ್ಕೆ ಪೂರಕ.
- ಶನಿ, ಕುಜ, ಬುಧ ದಶೆ: ಮೂರನೇ ಮನೆಯಲ್ಲಿ ಈ ಮೂರು ಗ್ರಹಗಳ ಸಂಯೋಗವು ನಿಮ್ಮ ಶೌರ್ಯ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.
ಗ್ರಹಗಳ ಪ್ರಭಾವ:
ಪರಿಶ್ರಮ ಮತ್ತು ಅಧಿಕಾರ :
ನಿಮ್ಮ ರಾಶ್ಯಾಧಿಪತಿ ಶನಿ ಮೂರನೇ ಮನೆಯಲ್ಲಿ ಬಲಿಷ್ಠನಾಗಿರುವುದರಿಂದ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಚೇರಿಯಲ್ಲಿ ಅಥವಾ ಸಮಾಜದಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿ ಹೆಚ್ಚಾಗಲಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲ. ಎದುರಾಳಿಗಳು ನಿಮ್ಮ ಮುಂದೆ ಮಂಡಿಯೂರುವರು.
ಕೃಷಿ ಮತ್ತು ಭೂಮಿ:
ಕೃಷಿಕರಿಗೆ ಈ ತಿಂಗಳು ಲಾಭದಾಯಕವಾಗಿದೆ. ಮೂರನೇ ಮನೆಯಲ್ಲಿರುವ ಕುಜ ಮತ್ತು ಶನಿ ಭೂಮಿಗೆ ಸಂಬಂಧಿಸಿದ ಹಳೆಯ ವಿವಾದಗಳನ್ನು ಬಗೆಹರಿಸುತ್ತಾರೆ. ತೋಟಗಾರಿಕಾ ಬೆಳೆಗಳನ್ನು ವಿಶೇಷವಾಗಿ ದೀರ್ಘಾವಧಿ ಬೆಳೆಗಳನ್ನು ಬೆಳೆಯಲು ಭೂಮಿ ಸಿದ್ಧಪಡಿಸಿಕೊಳ್ಳಬಹುದು. ಆದರೂ, ಶನಿಯ ಪ್ರಭಾವದಿಂದ ಅತಿಯಾದ ದೈಹಿಕ ಶ್ರಮ ಇರಲಿದೆ.
ಪ್ರೇಮ ಮತ್ತು ವಿವಾಹ:
ಶುಕ್ರನು 5ನೇ ಮನೆಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಇರುವುದರಿಂದ ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅದನ್ನು ಮನೆಯವರಿಗೆ ತಿಳಿಸಲು ಇದು ಸುಸಮಯ. ವಿವಾಹ ಸಂಬಂಧಗಳು ಅಂತಿಮವಾಗಬಹುದು. ಸಣ್ಣಪುಟ್ಟ ವಿಹಾರ ಪ್ರವಾಸಗಳು ಮನಸ್ಸಿಗೆ ಮುದ ನೀಡುತ್ತವೆ.
ಸ್ವ-ಉದ್ಯೋಗ ಮತ್ತು ವ್ಯಾಪಾರ:
ವ್ಯಾಪಾರದಲ್ಲಿ ಈ ತಿಂಗಳು ವೇಗ ಕಂಡುಬರುತ್ತದೆ. ವಿಶೇಷವಾಗಿ ತಾಂತ್ರಿಕ ಕ್ಷೇತ್ರ, ಕಬ್ಬಿಣ ಅಥವಾ ಸಿವಿಲ್ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಆದಾಯವಿದೆ. ಸ್ವ-ಉದ್ಯೋಗಿಗಳಿಗೆ ಹೊಸ ಆರ್ಡರ್‌ಗಳು ಕೈ ಸೇರುತ್ತವೆ. ಆದರೆ, ಆರನೇ ಮನೆಯ ಗುರುವಿನ ಕಾರಣದಿಂದ ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ಇರಲಿ. ಯಾರನ್ನೂ ಅತಿಯಾಗಿ ನಂಬಬೇಡಿ.
ಹವ್ಯಾಸ ಮತ್ತು ಕಲೆ:
ಕಲಾವಿದರಿಗೆ ಇದು ಸುವರ್ಣ ಕಾಲ. ಪಂಚಮ ಸ್ಥಾನದ ಶುಕ್ರ ನಿಮ್ಮ ಸೃಜನಶೀಲತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅಥವಾ ಪ್ರದರ್ಶನ ನೀಡಲು ಇದು ಯಶಸ್ವಿ ತಿಂಗಳು.
ಹೂಡಿಕೆ:
ಹೂಡಿಕೆಯ ವಿಷಯದಲ್ಲಿ ಮಿಶ್ರ ಫಲವಿದೆ. ಸ್ಥಿರ ಆಸ್ತಿಯ ಮೇಲೆ ಹೂಡಿಕೆ ಮಾಡಲು ರವಿ ಮತ್ತು ಶನಿಯ ಪ್ರಭಾವ ಪೂರಕವಾಗಿದೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡುವ ಮುನ್ನ ಎಚ್ಚರವಿರಲಿ. 6ನೇ ಮನೆಯಲ್ಲಿರುವ ಗುರುವು ಅನಗತ್ಯ ಸಾಲ ಮಾಡದಂತೆ ಎಚ್ಚರಿಸುತ್ತಾನೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು, ಆಹಾರ ಕ್ರಮದ ಮೇಲೆ ನಿಗಾ ಇರಲಿ.
ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ. ಗುರುವಾರದಂದು ದಾನ ಮಾಡಿ. ಶನಿವಾರದಂದು ಅನ್ನದಾನ ಮಾಡುವುದು ನಿಮ್ಮ ಕೆಲಸಗಳಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ.
– ಲೋಹಿತ ಹೆಬ್ಬಾರ್
