ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme – SCSS) ಮೂಲಕ ನಿವೃತ್ತರು ತಮ್ಮ 30 ಲಕ್ಷ ರೂ ಉಳಿತಾಯದಿಂದ ಪ್ರತಿ ತಿಂಗಳು ಸುಮಾರು ₹20,500 ನಿಯಮಿತ ಆದಾಯವನ್ನು ಹೇಗೆ ಪಡೆಯಬಹುದು. ಪ್ರಸ್ತುತ ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಹಣದುಬ್ಬರ ಹೆಚ್ಚುತ್ತಿರುವ ಈ ಸಮಯದಲ್ಲಿ, ಮಾರುಕಟ್ಟೆಯ ಏರಿಳಿತಗಳಿಂದ ದೂರವಿದ್ದು, ಸುರಕ್ಷಿತ ಹಾಗೂ ಸ್ಥಿರ ಆದಾಯ ಬಯಸುವ ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ಈ ಸರ್ಕಾರಿ ಯೋಜನೆ ಅತ್ಯುತ್ತಮವಾಗಿದೆ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅವರ ಹೆಸರಿನಲ್ಲಿ (ಅಕೌಂಟ್) ಈ ಸ್ಕೀಮ್ ಆರಂಭಿಸಿ ಲಾಭ ಪಡೆಯಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ ವಿವರ
- ಅರ್ಹತೆ: 60 ವರ್ಷ ಮೇಲ್ಪಟ್ಟ ವಯೋಮಾನದ ಭಾರತೀಯ ನಾಗರಿಕರು
- ಹೂಡಿಕೆ ಮಿತಿ: ಕನಿಷ್ಠ 1,000 ರೂನಿಂದ ಹಿಡಿದು 30,00,000 ರೂವರೆಗೂ ಹೂಡಿಕೆ ಮಾಡಬಹುದು.
- ಹೂಡಿಕೆ ಅವಧಿ: ಐದು ವರ್ಷ. ಇನ್ನೂ 3 ವರ್ಷ ವಿಸ್ತರಣೆ ಅವಕಾಶ ಇರುತ್ತದೆ.
- ಬಡ್ಡಿದರ: ವಾರ್ಷಿಕ ಶೇ. 8.2 ಬಡ್ಡಿ ಸದ್ಯಕ್ಕೆ (ಪ್ರತೀ ಕ್ವಾರ್ಟರ್ಗೆ ಸರ್ಕಾರದಿಂದ ಬಡ್ಡಿ ಪರಿಷ್ಕರಣೆ ಇರುತ್ತದೆ.)
- ಬಡ್ಡಿ ಹಣ ಸಂದಾಯ: ಪ್ರತೀ ಕ್ವಾರ್ಟರ್ಗೆ ಬಡ್ಡಿ ಆದಾಯ ನೀಡಲಾಗುತ್ತದೆ.
30 ಲಕ್ಷ ರೂ ಹೂಡಿಕೆ ಮಾಡಿದರೆ ಎಷ್ಟು ಆದಾಯ?
ಒಬ್ಬ ವ್ಯಕ್ತಿ 30 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಈ ಗರಿಷ್ಠ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಆದಾಯ ಸಿಗುತ್ತದೆ ಎನ್ನುವ ಲೆಕ್ಕಾಚಾರ ಇಲ್ಲಿದೆ. ಪ್ರಸ್ತುತ ಇರುವ ವಾರ್ಷಿಕ ಶೇ. 8.2 ಬಡ್ಡಿದರವೇ ಮುಂದುವರಿದಿದ್ದೇ ಆದಲ್ಲಿ ಈ ಕೆಳಕಂಡಂತೆ ಆದಾಯ ಸಿಗುತ್ತದೆ:
30 ಲಕ್ಷ ರೂಗೆ ವಾರ್ಷಿಕ ಶೇ. 8.2 ಬಡ್ಡಿ ಎಂದರೆ ವರ್ಷಕ್ಕೆ 2.46 ಲಕ್ಷ ರೂ ಆಗುತ್ತದೆ.
ಪ್ರತೀ ಕ್ವಾರ್ಟರ್ಗೆ 61,500 ರೂ. ಪ್ರತೀ ತಿಂಗಳಿಗೆ ಸುಮಾರು 20,500 ರೂ ಆದಾಯ ಸಿಕ್ಕಂತಾಗುತ್ತದೆ.
ಹಿರಿಯ ನಾಗರಿಕರಾದ ಪತಿ ಮತ್ತು ಪತ್ನಿ ಇಬ್ಬರೂ ತಲಾ ₹30 ಲಕ್ಷದಂತೆ ಒಟ್ಟು ₹60 ಲಕ್ಷ ಹೂಡಿಕೆ ಮಾಡಬಹುದು. ಆಗ ವಾರ್ಷಿಕವಾಗಿ ಒಟ್ಟು ₹4,92,000 ಬಡ್ಡಿ ಸಿಗುತ್ತದೆ. ಇದು ತಿಂಗಳಿಗೆ ಸರಾಸರಿ ಸುಮಾರು ₹41,000 ಆದಾಯ ಸಿಕ್ಕಂತಾಗುತ್ತದೆ.
ಎಸ್ಸಿಎಸ್ಎಸ್ ಯೋಜನೆಯಿಂದ ತೆರಿಗೆ ಸೌಲಭ್ಯಗಳು
ಈ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ (ಹಳೆಯ ತೆರಿಗೆ ಪದ್ಧತಿಯ ಪ್ರಕಾರ) ವಿನಾಯಿತಿ (Tax deduction) ಪಡೆಯಬಹುದು. ಆದರೆ, ಈ ಯೋಜನೆಯಿಂದ ಬರುವ ಬಡ್ಡಿ ಹಣಕ್ಕೆ ಹೂಡಿಕೆದಾರರ ವೈಯಕ್ತಿಕ ತೆರಿಗೆ ಸ್ಲ್ಯಾಬ್ (Tax Slab) ಪ್ರಕಾರ ತೆರಿಗೆ ಅನ್ವಯವಾಗುತ್ತದೆ.
ಇದನ್ನೂ ಓದಿ: ಕೊರಿಯಾದ ಶೇರು ಮಾರುಕಟ್ಟೆ ಧೂಳೀಪಟ; ಮಹಾಕುಸಿತಕ್ಕೆ ಕೋಸ್ಪಿ ಕಕ್ಕಾಬಿಕ್ಕಿ; ಜಪಾನ್, ಚೀನಾ ಮಾರುಕಟ್ಟೆಗಳೂ ತತ್ತರ
ಒಟ್ಟಾರೆ, ಅಸಲು ಹಣಕ್ಕೆ ಸಂಪೂರ್ಣ ಗ್ಯಾರಂಟಿ ಹಾಗೂ ಯಾವುದೇ ರಿಸ್ಕ್ ಇಲ್ಲದೆ ಪ್ರತಿ ತಿಂಗಳು ಸ್ಥಿರ ಆದಾಯ ಬಯಸುವ ಹಿರಿಯ ನಾಗರಿಕರಿಗೆ SCSS ಒಂದು ಉತ್ತಮ ಆಸರೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
