ಈ ತಿಂಗಳು ವೃಷಭ ರಾಶಿಯವರಿಗೆ ಹೆಚ್ಚು ಮಿಶ್ರ ಫಲಗಳಿಂದ ಕೂಡಿದೆ. ರಾಶ್ಯಾಧಿಪತಿ ಶುಕ್ರನ ಸಂಚಾರ ಮತ್ತು ಪ್ರಭಾವವು ಜೀವನದ ವಿವಿಧ ಆಯಾಮಗಳ ಮೇಲೆ ನೇರ ಪರಿಣಾಮ ಬೀರಲಿದೆ. ಶುಕ್ರನು ನಿಮ್ಮ ರಾಶಿಯಲ್ಲಿ ಸಂಚಾರವಾಗಲಿದೆ ಮತ್ತು ಶನಿಯು ಈ ರಾಶಿಯ ಮೇಲೆ ದೃಷ್ಟಿ ಇಡುವನು. ಆಗಾಗ ಉಂಟಾಗುವ ಚಂದ್ರನ ಸಂಯೋಗ ಮತ್ತು ದೃಷ್ಟಿಯಿಂದ ಮಾನಸಿಕ ಸ್ಥಿತಿಯೂ ವಿಚಿತ್ರವಾಗಬಹುದು.
ಶುಭ ದಶೆ
ಶುಕ್ರ ದಶೆ :
ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಬಲವಾಗಿದ್ದರೆ, ಈ ತಿಂಗಳು ಸುಖ-ಸಂತೋಷದ ವೃದ್ಧಿಯಾಗಲಿದೆ. ಹೊಸ ವಸ್ತುಗಳ ಖರೀದಿ, ಸೌಂದರ್ಯವರ್ಧಕ ವಸ್ತುಗಳ ಮೇಲೆ ಆಸಕ್ತಿ ಮತ್ತು ಕೌಟುಂಬಿಕವಾಗಿ ನೆಮ್ಮದಿ ಕಾಣುವಿರಿ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.
ಗುರು ದಶೆ :
ಜಾತಕದಲ್ಲಿ ಗುರುವಿನ ಅನುಗ್ರಹವಿದ್ದರೆ, ಆರ್ಥಿಕವಾಗಿ ಲಾಭದಾಯಕ ಸಮಯವಿದು. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಹಿರಿಯರ ಮಾರ್ಗದರ್ಶನದಿಂದ ದೊಡ್ಡ ಸಂಕಷ್ಟವೊಂದು ದೂರವಾಗಬಹುದು.
ಬುಧನ ದಶೆ :
ವ್ಯಾಪಾರ ಮತ್ತು ಸಂವಹನ ಕ್ಷೇತ್ರದಲ್ಲಿರುವವರಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ. ಬುದ್ಧಿವಂತಿಕೆಯಿಂದ ಕೈಗೊಂಡ ನಿರ್ಧಾರಗಳು ಹಣಕಾಸಿನ ಲಾಭ ತಂದುಕೊಡಲಿವೆ.
ಕಷ್ಟದ ದಶೆಗಳು
ಕುಜ ದಶೆ :
ಮಂಗಳನ ಪ್ರಭಾವವು ಅಧಮವಾಗಿದ್ದರೆ, ಅನಗತ್ಯ ಕೋಪ ಮತ್ತು ಆತುರದಿಂದ ಕೆಲಸಗಳು ಕೆಡುವ ಸಾಧ್ಯತೆ ಇರುತ್ತದೆ. ಸಣ್ಣ ವಿಷಯಗಳಿಗೂ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ತರ್ಕಗಳು ಉಂಟಾಗಬಹುದು. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ.
ಶನಿ ದಶೆ :
ಶನಿಯು ಅಶುಭ ಸ್ಥಾನದಲ್ಲಿದ್ದರೆ ಕೆಲಸದಲ್ಲಿ ವಿಳಂಬ ಉಂಟಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಕ್ಷಣವೇ ಸಿಗದೆ ನಿರಾಸೆ ಮೂಡಬಹುದು. ಕಾಲು ನೋವು ಅಥವಾ ಆಲಸ್ಯದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ರಾಹು-ಕೇತುಗಳ ದಶೆ :
ಮನಸ್ಸಿನಲ್ಲಿ ಗೊಂದಲ, ಅನಿಶ್ಚಿತ ಭಯ ಮತ್ತು ಇಲ್ಲದ ಚಿಂತೆಗಳು ಕಾಡುವ ಸಾಧ್ಯತೆ ಇದೆ. ಯಾರಿಗೂ ಸಾಲ ನೀಡುವ ಮುನ್ನ ಎಚ್ಚರವಿರಲಿ.
ಅಧಮ ದೆಸೆಗಳನ್ನು ನೀಗಿಸಲು ಶನಿವಾರದಂದು ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ಅಥವಾ ಹನುಮಾನ್ ಚಾಲೀಸಾ ಪಠಿಸುವುದು ಉತ್ತಮ.
– ಲೋಹಿತ ಹೆಬ್ಬಾರ್
