ಈ 3 ಟೆಸ್ಟ್‌ ಮಾಡಿಸಿ ನಿಮ್ಮ ಹೃದಯ ಆರೋಗ್ಯವಾಗಿದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ – Kannada News | Best Heart Health Tests To Detect Heart Problems Early

Best Heart Health Tests To Detect Heart Problems EarlyImage Credit source: Getty Images

ಇಂದಿನ ವೇಗದ ಜೀವನಶೈಲಿ, ಅಸ್ವಸ್ಥ ಆಹಾರ ಪದ್ಧತಿ, ಒತ್ತಡ ಮತ್ತು ವ್ಯಾಯಾಮದ ಕೊರತೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಹಿಂದೆ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಹೃದಯ ಸಮಸ್ಯೆಗಳು ಈಗ ಯುವಕರಲ್ಲೂ ಸಾಮಾನ್ಯವಾಗುತ್ತಿವೆ. ಹಾಗಾಗಿ ನಮ್ಮ ಹೃದಯದ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಮತ್ತು ಹೃದಯಾಘಾತದಂತಹ (Heart Attack) ಅಪಾಯವನ್ನು ಮುಂಚಿತವಾಗಿ ತಿಳಿದುಕೊಳ್ಳಲು ಕೆಲವು ಪ್ರಮುಖ ಪರೀಕ್ಷೆಗಳು ಬಹಳ ಸಹಾಯಕವಾಗಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆ ಟೆಸ್ಟ್‌ಗಳು ಯಾವುದು, ಯಾವ ಸಮಯಕ್ಕೆ ಮಾಡಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?

ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರುವುದಕ್ಕೆ ಪ್ರಮುಖ ಕಾರಣ ಧಮನಿಗಳಲ್ಲಿ ಕೊಬ್ಬು ಜಮೆಯಾಗುವುದು. ಇದನ್ನು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಸ್ ಎಂದು ಕರೆಯಲಾಗುತ್ತದೆ. ಈ ಕೊಬ್ಬು ಧಮನಿಗಳಲ್ಲಿ ನಿಧಾನವಾಗಿ ಸೇರಿ ರಕ್ತಪ್ರವಾಹವನ್ನು ತಡೆದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಲಿಪಿಡ್ ಪ್ರೊಫೈಲ್ ಟೆಸ್ಟ್

ಇದು ಸಾಮಾನ್ಯ ರಕ್ತ ಪರೀಕ್ಷೆಯಾಗಿದ್ದು, ದೇಹದಲ್ಲಿರುವ ಒಟ್ಟು ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಸ್, ಕೆಟ್ಟ ಕೊಬ್ಬು ( LDL ) ಮತ್ತು ಒಳ್ಳೆಯ ಕೊಬ್ಬು (HDL) ಮಟ್ಟವನ್ನು ತಿಳಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚು ಇದ್ದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ನಿಯಮಿತವಾಗಿ ಈ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಅಪಾಯವನ್ನು ಮುಂಚಿತವಾಗಿ ಪತ್ತೆಹಚ್ಚಬಹುದು.

ಸಿಟಿ ಕೊರೊನರಿ ಆಂಜಿಯೋಗ್ರಫಿ

ಈ ಪರೀಕ್ಷೆಯ ಮೂಲಕ ಹೃದಯದ ಧಮನಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ಬ್ಲಾಕೇಜ್ ಇದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಇದರಲ್ಲಿ ಶಸ್ತ್ರಚಿಕಿತ್ಸೆ ಅಥವಾ ದೊಡ್ಡ ನೋವು ಇರುವುದಿಲ್ಲ. ಕೆಲವೇ ನಿಮಿಷಗಳಲ್ಲಿ ವರದಿ ಸಿಗುತ್ತದೆ. ಹೃದಯದ ಸ್ಥಿತಿಯನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಇದು ಅತ್ಯಂತ ವಿಶ್ವಾಸಾರ್ಹ ಪರೀಕ್ಷೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಪದೇಪದೇ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಹೃದಯದ ಆರೋಗ್ಯ ಸರಿಯಾಗಿದ್ಯಾ ಪರೀಕ್ಷೆ ಮಾಡಿಸಿಕೊಳ್ಳಿ

ಇಕೋಕಾರ್ಡಿಯೋಗ್ರಫಿ

ಈ ಪರೀಕ್ಷೆ ಹೃದಯದ ರಚನೆ ಮತ್ತು ಅದರ ಪಂಪಿಂಗ್ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಹೃದಯದ ವಾಲ್ವ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ, ಹೃದಯ ದುರ್ಬಲವಾಗಿದೆಯೇ ಎಂಬುದನ್ನು ಇದರಿಂದ ತಿಳಿಯಬಹುದು. ಕೆಲವೊಮ್ಮೆ ಬ್ಲಾಕೇಜ್ ಇಲ್ಲದಿದ್ದರೂ ಹೃದಯ ದುರ್ಬಲವಾಗಿರಬಹುದು. ಅಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು ಇಕೋ ಟೆಸ್ಟ್ ಉಪಯುಕ್ತ.

ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸ ಇದ್ದರೆ, ಹೈ ಬಿಪಿ, ಮಧುಮೇಹ, ಧೂಮಪಾನ ಅಥವಾ ಅಧಿಕ ತೂಕ ಇದ್ದರೆ ನಿಯಮಿತ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಆರಂಭದಲ್ಲೇ ಸಮಸ್ಯೆ ಪತ್ತೆಯಾದರೆ ಜೀವನಶೈಲಿ ಬದಲಾವಣೆ ಮತ್ತು ಸರಿಯಾದ ಚಿಕಿತ್ಸೆಯಿಂದ ದೊಡ್ಡ ಅಪಾಯವನ್ನು ತಪ್ಪಿಸಬಹುದು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಮಯಕ್ಕೆ ಸರಿಯಾದ ಪರೀಕ್ಷೆಗಳು ನಿಮ್ಮ ಹೃದಯವನ್ನು ದೀರ್ಘಕಾಲ ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *