ಉಕ್ರೇನ್ ಮೇಲೆ ರಷ್ಯಾ ಪರಮಾಣು ಬಾಂಬ್ ಹಾಕದಂತೆ ಮೋದಿ ತಡೆದಿದ್ದರು; ಪೋಲೆಂಡ್ ಸಚಿವರಿಂದ ಮಹತ್ವದ ಬಹಿರಂಗ – Kannada News | PM Narendra Modi Stopped Putin From attacking Ukraine with nuclear bomb In 2022 Polish Minister said

ನವದೆಹಲಿ, ಜುಲೈ 14: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮಾತುಗಳಿಗೆ ಬಹಳ ಗೌರವ ನೀಡುತ್ತಾರೆ. ಅಲ್ಲದೆ, ರಷ್ಯಾದ ಮೇಲೆ ಪ್ರಭಾವ ಬೀರಬಲ್ಲ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಪ್ರಮುಖವಾದುದಾಗಿದೆ ಎಂದು ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ಟಿಯೋಫಿಲ್ ಬಾರ್ಟೋಶೆವ್ಸ್ಕಿ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತದ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದ ಪೋಲೆಂಡ್ ಸಚಿವ, 2022ರ ಕೊನೆಯಲ್ಲಿ ನಡೆದ ಒಂದು ಪ್ರಮುಖ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಉಕ್ರೇನ್ ವಿರುದ್ಧ ‘ಟ್ಯಾಕ್ಟಿಕಲ್’ ಪರಮಾಣು ಅಸ್ತ್ರಗಳನ್ನು ಬಳಸದಂತೆ ರಷ್ಯಾವನ್ನು ಒಪ್ಪಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದರು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಗೌರವಾನ್ವಿತ ನಾಯಕರಾಗಿದ್ದಾರೆ ಎಂದು ಬಣ್ಣಿಸಿದ ಬಾರ್ಟೋಶೆವ್ಸ್ಕಿ, “ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಪರಿಚಿತವಿರುವ ಅತ್ಯಂತ ಪ್ರಭಾವಿ ರಾಜತಾಂತ್ರಿಕರಾಗಿದ್ದಾರೆ. ಭಾರತವು ರಷ್ಯಾದೊಂದಿಗೆ ಸುದೀರ್ಘ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿ ತಮಗೆ ಹೇಳುವ ಮಾತುಗಳನ್ನು ಅತ್ಯಂತ ಸೂಕ್ಷ್ಮವಾಗಿ ಆಲಿಸುತ್ತಾರೆ ಮತ್ತು ಅದಕ್ಕೆ ಮನ್ನಣೆ ನೀಡುತ್ತಾರೆ” ಎಂದಿದ್ದಾರೆ.

ಇದನ್ನೂ ಓದಿ: ರಷ್ಯಾಗೆ ಭಾರತವೇ ಆಸರೆ, ಡ್ರೋನ್ ದಾಳಿಯಿಂದ ತತ್ತರಿಸಿ ಪೆಟ್ರೋಲ್ ಖರೀದಿಗೆ ಮುಂದಾದ ಪುಟಿನ್ ಸರ್ಕಾರ

ರಷ್ಯಾ ಅಧ್ಯಕ್ಷ ಪುಟಿನ್ ಅವರ ಮೇಲೆ ನಿಜವಾದ ಪ್ರಭಾವ ಬೀರಬಲ್ಲ ಮತ್ತು ಒತ್ತಡ ಹೇರಬಲ್ಲ ವಿಶ್ವದ ಕೆಲವೇ ಕೆಲವು ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರಾಗಿದ್ದಾರೆ. ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸುವಂತೆ ಅಮೆರಿಕ ಅಥವಾ ಯುರೋಪಿಯನ್ ಒಕ್ಕೂಟ ಹೇಳುವುದಕ್ಕಿಂತಲೂ ರಷ್ಯಾವನ್ನು ವಿರೋಧಿಸದ ದೇಶಗಳು ಹೇಳುವ ಮಾತುಗಳಿಗೆ ಮಾಸ್ಕೋದಲ್ಲಿ ಹೆಚ್ಚಿನ ತೂಕ ಇರುತ್ತದೆ ಎಂದು ಬಾರ್ಟೋಶೆವ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ.

“ಯುದ್ಧದ ಉಲ್ಬಣವನ್ನು ತಡೆಯಲು ಕೇವಲ ಭಾರತದ ಪ್ರಧಾನಿ ಮೋದಿ ಮಾತ್ರವಲ್ಲದೆ, ಚೀನಾದ ಕ್ಸಿ ಜಿನ್‌ಪಿಂಗ್ ಕೂಡ ಬಯಸುತ್ತಿದ್ದಾರೆ. ರಷ್ಯಾಗೆ ಶತ್ರುಗಳಂತೆ ಕಾಣದ ದೇಶಗಳಿಂದ ಇಂತಹ ಶಾಂತಿಯ ಕರೆಗಳು ಬಂದಾಗ ಅದರ ಪ್ರಭಾವ ಹೆಚ್ಚಿರುತ್ತದೆ. ಈ ವಿಷಯದಲ್ಲಿ ಭಾರತದ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದಿದ್ದಾರೆ.

“ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲು ಯಾವುದೇ ದೇಶ ಪ್ರಯತ್ನಿಸಿದರೂ ಅದು ವ್ಯರ್ಥ ಎಂಬುದನ್ನು ಜಗತ್ತು ಈಗಾಗಲೇ ಅರ್ಥಮಾಡಿಕೊಂಡಿದೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಎಲ್ಲಾ ದೇಶಗಳೊಂದಿಗೆ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾಗೆ ಭಾರತವೇ ಆಸರೆ, ಡ್ರೋನ್ ದಾಳಿಯಿಂದ ತತ್ತರಿಸಿ ಪೆಟ್ರೋಲ್ ಖರೀದಿಗೆ ಮುಂದಾದ ಪುಟಿನ್ ಸರ್ಕಾರ

“ಆರಂಭದಲ್ಲಿ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಾವು ಟೀಕಿಸಿದ್ದೆವು. ಮಾರುಕಟ್ಟೆ ಬೆಲೆಗಿಂತ ಶೇ. 40ರಷ್ಟು ರಿಯಾಯಿತಿಯಲ್ಲಿ ತೈಲ ಸಿಗುತ್ತಿರುವುದರಿಂದ ಭಾರತ ಅದನ್ನು ಖರೀದಿಸುತ್ತಿದೆ ಎಂಬ ಆರ್ಥಿಕ ಕಾರಣ ನಮಗೆ ಅರ್ಥವಾಗಿತ್ತು. ಆದರೆ, ಆ ಹಣವು ರಷ್ಯಾದ ಯುದ್ಧದ ಆರ್ಥಿಕತೆಗೆ ನೆರವಾಗುತ್ತಿದೆ ಎಂಬ ಆತಂಕ ನಮಗಿತ್ತು. ಈಗ ಎರಡೂ ದೇಶಗಳು ಪರಸ್ಪರರ ಪರಿಸ್ಥಿತಿ ಮತ್ತು ನಿಲುವುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ. ಹಾಗಾಗಿ ಈ ವಿಷಯವು ಈಗ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಮೂಡಿಸಿಲ್ಲ” ಎಂದು ಪೋಲೆಂಡ್ ನಾಯಕ ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 8:48 pm, Tue, 14 July 26

Source link

Leave a Reply

Your email address will not be published. Required fields are marked *