ನವದೆಹಲಿ, ಜುಲೈ 4: ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶನಿವಾರ ಮತ್ತೊಂದು ಸುತ್ತಿನ ಪ್ರಹಾರ ನಡೆಸಿದೆ. ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಎ-ತೊಯ್ಬಾ (LeT), ಜಮಾತ್-ಉದ್-ದಾವಾ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಬರೋಬ್ಬರಿ 23 ಜನರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೆಕ್ಷನ್ 35ರ ಅಡಿಯಲ್ಲಿ ‘ಘೋಷಿತ ಭಯೋತ್ಪಾದಕರು’ ಎಂದು ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ವಿವಿಧ ಭಾಗಗಳಲ್ಲಿ ನಡೆದ ಭೀಕರ ಉಗ್ರರ ದಾಳಿ ಹಾಗೂ ದೇಶವಿರೋಧಿ ಕೃತ್ಯಗಳಲ್ಲಿ ಈ 23 ಮಂದಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಡ್ರೋನ್ ಶಸ್ತ್ರಾಸ್ತ್ರ ಸರಬರಾಜು ಮತ್ತು ದಾಳಿಗಳ ಮಾಸ್ಟರ್‌ಮೈಂಡ್‌ಗಳು
ಈ ಪಟ್ಟಿಯಲ್ಲಿರುವ ಉಗ್ರರು ಕೇವಲ ದಾಳಿಯಷ್ಟೇ ಅಲ್ಲದೆ, ಭಾರತದೊಳಗೆ ನುಸುಳುವಿಕೆ, ಭಯೋತ್ಪಾದನೆಗೆ ಯುವಕರ ನೇಮಕಾತಿ, ತರಬೇತಿ, ಉಗ್ರರಿಗೆ ಆರ್ಥಿಕ ನೆರವು, ಶಸ್ತ್ರಾಸ್ತ್ರ ಪೂರೈಕೆ ಮತ್ತು ಇತ್ತೀಚಿನ ದಿನಗಳಲ್ಲಿ ಡ್ರೋನ್‌ಗಳ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ರವಾನಿಸುವ ಜಾಲದಲ್ಲಿ ಸಕ್ರಿಯರಾಗಿದ್ದರು. ಪ್ರಮುಖವಾಗಿ 2022ರ ಏಪ್ರಿಲ್ 22ರಂದು ಜಮ್ಮುವಿನ ಸುಂಜ್ವಾನ್‌ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿ ಹಾಗೂ 2016ರ ನವೆಂಬರ್ 29ರಂದು ಜಮ್ಮುವಿನ ನಗ್ರೋಟಾ ಸೇನಾ ಶಿಬಿರದ ಮೇಲೆ ನಡೆದ ಭೀಕರ ಉಗ್ರರ ದಾಳಿಗಳಲ್ಲಿ ಈ ವ್ಯಕ್ತಿಗಳು ಪ್ರಮುಖ ಸಂಚು ರೂಪಿಸಿದ್ದರು ಎಂದು ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಉಗ್ರರೆಂದು ಘೋಷಿಸುವುದರ ಪ್ರಯೋಜನವೇನು?
1967ರ ಯುಎಪಿಎ ಕಾಯ್ದೆಗೆ 2019 ರಲ್ಲಿ ತಿದ್ದುಪಡಿ ತಂದ ನಂತರ, ಕೇವಲ ಉಗ್ರಗಾಮಿ ಸಂಘಟನೆಗಳನ್ನಷ್ಟೇ ಅಲ್ಲದೆ ವೈಯಕ್ತಿಕವಾಗಿಯೂ ‘ಭಯೋತ್ಪಾದಕರು’ ಎಂದು ಘೋಷಿಸಲು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಸಿಕ್ಕಿದೆ. ಈಗ ಈ 23 ಜನರ ಹೆಸರುಗಳನ್ನು ಪಟ್ಟಿಗೆ ಸೇರಿಸಿರುವುದರಿಂದ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಕ್ಷಣವೇ ಇವರ ಬ್ಯಾಂಕ್ ಖಾತೆಗಳನ್ನು ಮತ್ತು ಆರ್ಥಿಕ ವಹಿವಾಟುಗಳನ್ನು ಸ್ಥಗಿತಗೊಳಿಸಬಹುದಾಗಿದೆ. ಶಸ್ತ್ರಾಸ್ತ್ರಗಳ ಖರೀದಿಗೆ ನಿಷೇಧ ಹೇರಬಹುದು ಮತ್ತು ಭಾರತದಲ್ಲಿ ಇವರಿಗಿರುವ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು (Seize) ಹಾಕಿಕೊಳ್ಳಬಹುದಾಗಿದೆ.
ಎಕ್ಸ್ ಮೂಲಕ ಗೃಹ ಸಚಿವ ಅಮಿತ್ ಶಾ ಮಾಹಿತಿ
Pursuing Modi Ji’s vision of zero tolerance against terror, the MHA today declared 23 dreaded terror functionaries as terrorists under the provisions of the Unlawful Activities (Prevention) Act.
The designated terrorists are involved in anti-India activities, carrying out…
— गृहमंत्री कार्यालय, HMO India (@HMOIndia) July 4, 2026
ಪಾಕಿಸ್ತಾನದಿಂದಲೇ ಆಪರೇಷನ್
ಈ ಪಟ್ಟಿಯಲ್ಲಿರುವ 23 ಉಗ್ರರ ಪೈಕಿ 17 ಜನ ಪಾಕಿಸ್ತಾನಿ ಪ್ರಜೆಗಳಾಗಿದ್ದರೆ, ಉಳಿದ 6 ಜನ ಭಾರತೀಯ ಮೂಲದವರಾಗಿದ್ದಾರೆ. ಆದರೆ, ಸದ್ಯ ಇವರೆಲ್ಲರೂ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಆಶ್ರಯ ಪಡೆದುಕೊಂಡಿದ್ದು, ಅಲ್ಲಿಂದಲೇ ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಿಯಂತ್ರಿಸುತ್ತಿದ್ದಾರೆ. ಜೈಶ್ ಸಂಘಟನೆಯ ಮಸೂದ್ ಇಲ್ಯಾಸ್ ಕಾಶ್ಮೀರಿ, ಮುಫ್ತಿ ಮೊಹಮ್ಮದ್ ಅಸ್ಗರ್ ಖಾನ್ ಸೇರಿದಂತೆ ಲಷ್ಕರ್ ಸಂಘಟನೆಯ ಫಿರ್ದೌಸ್ ಅಹ್ಮದ್ ಭಟ್, ಬಿಲಾಲ್ ಅಹ್ಮದ್ ಮಿರ್ ಮತ್ತು ಅಲ್ ಖೈದಾ-ಐಸಿಸ್ ಜೊತೆ ನಂಟಿರುವ ಮೊಹಮ್ಮದ್ ಶಾಹಿದ್ ಫೈಸಲ್ ಈ ಕಪ್ಪು ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
