ಉಚಿತ ಭಾಗ್ಯದ ಬಸ್‌ಗಳಿಗೆ ತಳ್ಳುವ ಭಾಗ್ಯ: ಪೋಸ್ಟ್ ವೈರಲ್Image Credit source: tv9
ಚಿಕ್ಕಮಗಳೂರು, ಏಪ್ರಿಲ್ 20: ಸರ್ಕಾರದ ಉಚಿತ ಯೋಜನೆಗಳ ಆರ್ಭಟದ ನಡುವೆ ಸಾರಿಗೆ ಬಸ್‌ಗಳ ನಿರ್ವಹಣೆ ಅಧೋಗತಿಗೆ ತಲುಪಿದೆಯೇ? ಇಂತಹದೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ನಗರದ ಮಧ್ಯರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ (KSRTC Bus) ಬಸ್‌ವೊಂದು ಕೆಟ್ಟು ನಿಂತಿದ್ದು, ಪ್ರಯಾಣಿಕರೇ ಬಸ್ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ‘ಕರ್ನಾಟಕ ಪೋರ್ಟ್ಫೋಲಿಯೋ’ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸದ್ಯ ಈ ಪೋಸ್ಟ್ ಹಾಗೂ ವಿಡಿಯೋ ವೈರಲ್ ಆಗುತ್ತಿದೆ.
ರಸ್ತೆಯಲ್ಲೇ ನಿಂತ ಕೆಎಸ್‌ಆರ್‌ಟಿಸಿ ಬಸ್
ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಕಳಸಾಪುರಕ್ಕೆ ತೆರಳುತ್ತಿದ್ದ ಬಸ್, ನಗರದ ಎನ್‌ಎಂಸಿ (NMC) ಸಿಗ್ನಲ್ ಬಳಿ ತಲುಪುತ್ತಿದ್ದಂತೆ ತಾಂತ್ರಿಕ ದೋಷದಿಂದ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಟ್ರಾಫಿಕ್ ದಟ್ಟಣೆ ಇರುವ ಪ್ರದೇಶದಲ್ಲೇ ಬಸ್ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಈ ವೇಳೆ ಪ್ರಯಾಣಿಕರು ಅನಿವಾರ್ಯವಾಗಿ ಬಸ್‌ನಿಂದ ಕೆಳಗಿಳಿದು ರಸ್ತೆಯಲ್ಲೇ ಬಸ್ ತಳ್ಳುವ ಮೂಲಕ ಡಿಪೋಗೆ ಕಳುಹಿಸಿಕೊಟ್ಟಿದ್ದಾರೆ.
ಸಾರ್ವಜನಿಕರ ಆಕ್ರೋಶ
ಒಂದೆಡೆ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುತ್ತಿದೆ. ಆದರೆ, ಬಸ್‌ಗಳ ಸುಸ್ಥಿತಿಯ ಬಗ್ಗೆ ಮಾತ್ರ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ‘ಫ್ರೀ ಕೊಡುವುದು ಮುಖ್ಯವಲ್ಲ, ನಾವು ಪ್ರಯಾಣಿಸುವ ಬಸ್ ಸುರಕ್ಷಿತವಾಗಿರಬೇಕು. ರಸ್ತೆಯಲ್ಲಿ ಬಸ್ ಕೆಟ್ಟು ನಿಂತರೆ ಪ್ರಯಾಣಿಕರ ಸಮಯ ಮತ್ತು ಘನತೆಗೆ ಬೆಲೆ ಇಲ್ಲವೇ?’ ಎಂದು ಸ್ಥಳೀಯರು ಮತ್ತು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಉಚಿತ ಯೋಜನೆಗಳ ಪ್ರಚಾರಕ್ಕೆ ನೀಡುವ ಆದ್ಯತೆಯನ್ನು ಬಸ್‌ಗಳ ನಿರ್ವಹಣೆಗೆ ನೀಡುತ್ತಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಬಗ್ಗೆಯೂ ‘ಕರ್ನಾಟಕ ಪೋರ್ಟ್ಫೋಲಿಯೋ’ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ
Vote Bank on Wheels, Maintenance in Ruins
Are these the real perks of freebies that the citizens of Karnataka deserve? While people are promised free travel and welfare schemes, the most basic responsibility of maintaining public buses seems to be ignored. What is the use of… pic.twitter.com/iQAN5p16tO
— Karnataka Portfolio (@karnatakaportf) April 19, 2026
ಬಸ್‌ಗಳ ಕಳಪೆ ನಿರ್ವಹಣೆಯಿಂದಾಗಿ ಪ್ರಯಾಣಿಕರು ಹೈರಾಣಾಗುತ್ತಿದ್ದು, ಸರ್ಕಾರ ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಉಚಿತ ಯೋಜನೆಗಳನ್ನು ನೀಡದೆ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
