ಉಜ್ಜಿನಿಯಲ್ಲಿ ನೈಜ ದೃಶ್ಯಗಳನ್ನು ಸೆರೆ ಹಿಡಿದ ‘ಊರಬ್ಬ’ ಸಿನಿಮಾ; ಟ್ರೇಲರ್ ನೋಡಿ – Kannada News

ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ‘ಊರಬ್ಬ’ (Urabba) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮಾಗಡಿ ತಾಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ ಮತ್ತು ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆ ಇಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್ ಅವರು ಈ ಸಿನಿಮಾ ಮಾಡಿದ್ದಾರೆ. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ (Tanisha Kuppanda), ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕುಣಿಗಲ್ ಶಾಸಕ ರಂಗನಾಥ್ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು.

ವಿಶೇಷ ಏನೆಂದರೆ ಉಜ್ಜನಿ ಜಾತ್ರೆಯ ನೈಜ ದೃಶ್ಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಎಂ.ಡಿ. ಶ್ರೀಧರ್, ಹೆಚ್. ವಾಸು, ಎ.ವಿ. ಕೃಷ್ಣಕುಮಾರ್, ಬಾಹುಬಲಿ, ಈಶ್ವರ್ ಹೀಗೆ ಐವರು ಸೇರಿ ಎಂಟು ಕ್ಯಾಮೆರಾ ಬಳಸಿ ಜಾತ್ರೆ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ಲಕ್ಕಿ ಶಂಕರ್ ಅವರು ಮಾಹಿತಿ ನೀಡಿದರು.

‘ಊರಬ್ಬ’ ಸಿನಿಮಾದ ಟ್ರೇಲರ್:

‘ಇದು ನಾನು ಮಾಡಿದ್ದಲ್ಲ, ಆ ಚೌಡೇಶ್ವರಿಯೇ ಮಾಡಿಸಿದ್ದು. ಆಕೆಯ ಶಕ್ತಿಯನ್ನು ನಂಬಿ ಈ ಸಿನಿಮಾ ಮಾಡಿದ್ದೇನೆ. ಹಿಂದಿನಿಂದ ಕಂಟೆಂಟ್ ಬೇಸ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಏನಾದರೂ ಭಿನ್ನವಾಗಿ ಮಾಡೋಣ ಎಂದಾಗ ಈ ಕಾನ್ಸೆಪ್ಟ್ ಹೊಳೆಯಿತು. ಶೂಟಿಂಗ್ ಮಾಡುವಾಗ ಊರ ಜನರ ಸಹಕಾರ ತುಂಬಾ ಇತ್ತು. ಈ ಥರದ ಪ್ರಾಜೆಕ್ಟ್ ಮಾಡಲು ನಿರ್ಮಾಪಕ ನರೇಶ್ ಗೌಡ ಅವರು ಸಾಥ್ ನೀಡಿದರು’ ಎಂದು ಲಕ್ಕಿ ಶಂಕರ್ ಹೇಳಿದರು.

Urabba Kannada Movie Team

‘ಉಗಾದಿ ಹಬ್ಬದ 15 ದಿನಗಳ ನಂತರ ಈ ಜಾತ್ರೆ ಆರಂಭ ಆಗುತ್ತೆ. ಡೈಲಾಗ್ ಬರೆದ ವಾಸು, ಶ್ರೀಧರ್ ಅವರೇ ನಿಜವಾದ ಡೈರೆಕ್ಟರ್. ಅವರ ಸಲಹೆ ತಗೊಂಡು ಇಡೀ ಜಾತ್ರೆಯನ್ನು ಲೈವ್ ಆಗಿ ಶೂಟ್ ಮಾಡಿದ್ದೇವೆ. ಈ ಪ್ರಯತ್ನ ಭಾರತದಲ್ಲೇ ಮೊದಲು. ಸಾವಿರಾರು ವರ್ಷಗಳ ಹಿಂದೆ ನಡೆದ ಇತಿಹಾಸವನ್ನು ತಿಳಿದುಕೊಂಡು ಸಿನಿಮಾ ಮಾಡಿದ್ದೇನೆ. ಸೆನ್ಸಾರ್​ನಲ್ಲಿ ಸ್ವಲ್ಪ ತೊಂದರೆ ಆದರೂ, ಸರಿ ಮಾಡಿಕೊಂಡೆವು ’ ಎಂದಿದ್ದಾರೆ ಲಕ್ಕಿ ಶಂಕರ್.

ಇದನ್ನೂ ಓದಿ: ತನಿಷಾ ಕುಪ್ಪಂಡ ಜೊತೆ ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್; ನಟಿಯ ನೇರ ಕ್ಲಾಸ್

ನಿರ್ಮಾಪಕ ನರೇಶ್ ಗೌಡ ಕೂಡ ಈ ವೇಳೆ ಮಾತನಾಡಿದರು. ‘ಈ ಸಿನಿಮಾ ಆಗಲು ಮುಖ್ಯ ಕಾರಣ ಲಕ್ಕಿ ಶಂಕರ್. ನಾನು ಸಿನಿಮಾನೇ ಮಾಡಬಾರದು ಎಂದುಕೊಂಡಿದ್ದೆ, ಈಗ ಮಾಡಿದ್ದೇನೆ. ಮಂಗಳವಾರ ಚೌಡೇಶ್ವರಿ ದೇವಿಯ ವಾರ. ಚಿತ್ರದ ಎಲ್ಲ ಕೆಲಸಗಳು ಇದೇ ದಿನ ಆಗುತ್ತಿವೆ. ಈ ಸಿನಿಮಾದಲ್ಲಿ 30ರಿಂದ 40 ಜನ‌ ಕಲಾವಿದರು ನಟನೆ ಮಾಡಿದ್ದಾರೆ. ನಾನೂ ಒಂದು ಪಾತ್ರ ಮಾಡಿದ್ದೇನೆ. ಬಹಳ ಜನ ತಂತ್ರಜ್ಞರು ಕೈಜೋಡಿಸಿದ್ದಾರೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *