ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ರಾತ್ರಿ ಮಾರಾಮಾರಿ
ಉಡುಪಿ, ಜೂನ್ 10: ಜಿಲ್ಲೆಯ ಪ್ರಸಿದ್ಧ ಶ್ರೀ ಕೃಷ್ಣ ಮಠದ (Udupi Krishna Math) ಪಾರ್ಕಿಂಗ್ ಪ್ರದೇಶದಲ್ಲಿ ತಡರಾತ್ರಿ ಪ್ರವಾಸಿಗರು ಮತ್ತು ಸ್ಥಳೀಯ ವ್ಯಕ್ತಿಯೊಬ್ಬರ ನಡುವೆ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಭೀಕರ ಮಾರಾಮಾರಿ ನಡೆದಿದೆ. ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಪ್ರವಾಸಿಗರು ಹಾಗೂ ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಎಂಬುವರ ನಡುವೆ ಈ ಘರ್ಷಣೆ ಸಂಭವಿಸಿದೆ.
ಮುಖ್ಯಾಂಶಗಳು
- ಉಡುಪಿ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಸೈಡ್ ಕೊಡುವ ವಿಚಾರಕ್ಕೆ ತಡರಾತ್ರಿ ಭೀಕರ ಗಲಾಟೆ.
- ಪ್ರವಾಸಿಗರ ಮೇಲೆ ಕಾರು ಹಾಯಿಸಲು ಯತ್ನಿಸಿ, ಕಂಬಳದ ಕೋಲಿನಿಂದ ಹಲ್ಲೆ ನಡೆಸಿದ ಸ್ಥಳೀಯ ವ್ಯಕ್ತಿ.
- ಹೈದರಾಬಾದ್‌ನ ಪವನ್ ಹಾಗೂ ಸ್ಥಳೀಯ ಸುಪ್ರೀತ್ ಇಬ್ಬರಿಂದಲೂ ಉಡುಪಿ ನಗರ ಠಾಣೆಯಲ್ಲಿ ದೂರು.
ಕಾರು ಹಾಯಿಸಲು ಯತ್ನ, ಕಂಬಳದ ಕೋಲಿನಿಂದ ಹಲ್ಲೆ!
ಮಹಿಳೆಯರು ಹಾಗೂ ಮಕ್ಕಳೊಂದಿಗೆ ಕೃಷ್ಣ ಮಠದ ದರ್ಶನಕ್ಕೆ ಬಂದಿದ್ದ ಪ್ರವಾಸಿಗರು, ಸುಪ್ರೀತ್‌ಗೆ ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ. ಇದರಿಂದ ಕೆರಳಿದ ಸುಪ್ರೀತ್, ನಾನು ಲೋಕಲ್ ವ್ಯಕ್ತಿ, ಕಾರು ಚಲಾಯಿಸುವುದೇ ಹೀಗೆ ಎಂದು ಧಮ್ಕಿ ಹಾಕಿದ್ದಲ್ಲದೆ, ಪ್ರವಾಸಿಗರ ಮೇಲೆ ಕಾರು ಹಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಅಷ್ಟಕ್ಕೇ ನಿಲ್ಲದೆ, ತನ್ನ ಕಾರಿನಲ್ಲಿದ್ದ ಕಂಬಳದ ಕೋಲನ್ನು ತೆಗೆದು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದಾಳಿಯಿಂದಾಗಿ ಆಂಧ್ರದ ಪ್ರವಾಸಿಗರು ಗಾಯಗೊಂಡಿದ್ದಾರೆ.
ಪರಸ್ಪರ ದೂರು ದಾಖಲು
ಸ್ಥಳೀಯ ವ್ಯಕ್ತಿಯ ದರ್ಪದಿಂದ ಆಕ್ರೋಶಗೊಂಡ ಪ್ರವಾಸಿಗರು ಸುಪ್ರೀತ್ ಕಾರಿನ ಗ್ಲಾಸ್ ಜಖಂಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಸುಪ್ರೀತ್ ಕೂಡ ಪ್ರತಿದೂರು ನೀಡಿದ್ದು, ತಾವು ಪತ್ನಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಪ್ರವಾಸಿಗರು ಗಲಾಟೆ ಮಾಡಿ, ತಮ್ಮ ಮೇಲೆ ಚೇರ್ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯ ತೀವ್ರತೆಗೆ ತಮಗೆ ಬಾಯಿಯಿಂದ ರಕ್ತಸ್ರಾವವಾಗಿದೆ ಎಂದು ಸುಪ್ರೀತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ ಗರ್ಭಕೋಶದಿಂದ 8 ಕೆಜಿ ಗಡ್ಡೆ ಹೊರತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು: ಮಹಿಳೆಗೆ ಮರುಜನ್ಮ
ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ಪವನ್ ಹಾಗೂ ಸ್ಥಳೀಯ ಸುಪ್ರೀತ್ ಇಬ್ಬರ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.