ಡೆಹ್ರಾಡೂನ್, ಆ.14: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್‌ಕೋಟಿ ಬಳಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದಕ್ಕೆ ದಿಢೀರನೆ ನೀರು ಹಾಗೂ ಕಸ-ಬಂಡೆಗಳ ತ್ಯಾಜ್ಯ (debris) ನುಗ್ಗಿದ ಪರಿಣಾಮ 7 ಜನ ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ಗೆ ಸೇರಿದ ‘ವಿಷ್ಣುಗಡ-ಪೀಪಲ್‌ಕೋಟಿ’ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಅಗ್ರಸ್ಥಾನದ ಕಾಮಗಾರಿ ನಡೆಯುತ್ತಿದ್ದಾಗ, ಗುರುವಾರ ಸಂಜೆ ಭಾರಿ ಪ್ರಮಾಣದ ನೀರು ಮತ್ತು ಮಣ್ಣು-ಕಲ್ಲುಗಳ ಮಿಶ್ರಣ ಒಳನುಗ್ಗಿದೆ.
ಘಟನೆ ಸಂಭವಿಸಿದಾಗ ಸ್ಥಳದಲ್ಲಿ ಒಟ್ಟು 22 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ನೀರಿನ ರಭಸಕ್ಕೆ ಹಲವರು ಸುರಂಗದ ಹೊರಭಾಗಕ್ಕೆ ತಳ್ಳಲ್ಪಟ್ಟಿದ್ದರೆ, ಹಲವರು ಒಳಭಾಗದಲ್ಲೇ ಸಿಲುಕಿಕೊಂಡಿದ್ದರು. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ಐಟಿಬಿಪಿ (ITBP), ಸೇನೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಜನರನ್ನು ಹೊರತೆಗೆದಿದ್ದಾರೆ. 14 ಗಾಯಾಳುಗಳನ್ನು ಗೋಪೇಶ್ವರ ಮತ್ತು ಪೀಪಲ್‌ಕೋಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್‌ನ ವಿಪತ್ತು ನಿರ್ವಹಣಾ ಕೇಂದ್ರದಿಂದ ನೇರ ಪರಿಶೀಲನೆ ನಡೆಸುತ್ತಿದ್ದು, ರಕ್ಷಣಾ ಕಾರ್ಯಕ್ಕೆ ವೇಗ ನೀಡುವಂತೆ ಆದೇಶಿಸಿದ್ದಾರೆ. ದುರಂತದಲ್ಲಿ ಜಾರ್ಖಂಡ್ ಹಾಗೂ ಛತ್ತೀಸ್‌ಗಢ ಮೂಲದ ಕಾರ್ಮಿಕರೂ ಗಾಯಗೊಂಡಿರುವುದರಿಂದ, ಸಿಎಂ ಧಾಮಿ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಛತ್ತೀಸ್‌ಗಢ ಸಿಎಂ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ಮತ್ತು ಸಹಾಯದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು
ಕಳೆದ ಕೆಲವು ದಿನಗಳಿಂದ ಚಮೋಲಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇತ್ತೀಚೆಗೆ ನೀತಿ ಕಣಿವೆ ಪ್ರದೇಶದಲ್ಲಿ ನದಿಯ ರಭಸಕ್ಕೆ ಸೇತುವೆಯೊಂದು ಕೊಚ್ಚಿಹೋಗಿದ್ದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
