ಉತ್ತರ ಕರ್ನಾಟಕದಲ್ಲಿ ನದಿಗಳ ಭೋರ್ಗರೆತ: ದಿಕ್ಕೆಟ್ಟ ಬೆಳಗಾವಿ-ಬಾಗಲಕೋಟೆ ಮಂದಿ – Kannada News | Karnataka Rains: North Karnataka Grapples with Severe Flooding as Rivers Overflow

ನದಿ ಉಕ್ಕಿಹರಿದ ಪರಿಣಾಮ ಸೇತುವೆ ಮೇಲೆ ಹರಿದ ನೀರುImage Credit source: Tv9 Kannada

ಬೆಳಗಾವಿ/ಬಾಗಲಕೋಟೆ, ಜುಲೈ 09: ಕಳೆದ ವಾರ ಮಳೆ ಇಲ್ಲದೆ ನೀರಿಗಾಗಿ ಪರದಾಡುತ್ತಿದ್ದ ಉತ್ತರ ಕರ್ನಾಟಕದ ಜಿಲ್ಲೆಗಳು ಇದೀಗ ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ, ಮಾರ್ಕಂಡೇಯ, ದೂಧಗಂಗಾ ಮತ್ತು ವೇದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮವಾಗಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಜಮೀನುಗಳು, ಸೇತುವೆಗಳು, ದೇಗುಲಗಳು ಮತ್ತು ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ.

ಬೆಳಗಾವಿ ಜಿಲ್ಲೆಯಲ್ಲಿ 12 ಸಂಪರ್ಕ ಸೇತುವೆಗಳು ಮುಳುಗಡೆ


ಕೃಷ್ಣಾ ನದಿ ಭೋರ್ಗರೆಯುತ್ತಿದ್ದು, ವೇದಗಂಗಾ ಮತ್ತು ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 12 ಸಂಪರ್ಕ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ದೇಗುಲಗಳು, ದರ್ಗಾಗಳು, ಸ್ಮಶಾನಗಳು ಮತ್ತು ರೈತರ ಬೆಳೆ ಭೂಮಿಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬೆಳಗಾವಿ ಹೊರವಲಯದಲ್ಲಿ ಹರಿಯುವ ಮಾರ್ಕಂಡೇಯ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಂಬೇವಾಡಿ ಗ್ರಾಮ ಸೇರಿದಂತೆ ನೂರಾರು ಎಕರೆ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿ, ನದಿಯಂತಾಗಿ ಮಾರ್ಪಟ್ಟಿವೆ.

ಇದನ್ನೂ ಓದಿ: ಕರಾವಳಿ, ಮಲೆನಾಡಲ್ಲಿ ಮುಂದುವರಿಯಲಿದೆ ಮಳೆ; ಸಕಲೇಶಪುರದ ಹೊಗದಹಳ್ಳದಲ್ಲಿ ದಾಖಲೆಯ ವರ್ಷಧಾರೆ

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಕೃಷ್ಣಾ ನದಿಯ ಅಬ್ಬರಕ್ಕೆ ರಾಯಬಾಗ ತಾಲೂಕಿನ ಕುಡಚಿ ಸೇತುವೆ ಮತ್ತು ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿ ಬಂದ್ ಆಗಿವೆ. ಕುಡಚಿ ಮತ್ತು ಉಗಾರ ಕುರ್ದ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯೂ ಸಹ ಮುಳುಗಡೆಯಾಗಿದ್ದು, ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ಜಮಖಂಡಿ ಭಾಗದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಜಲಾಶಯಕ್ಕೆ 1.19 ಲಕ್ಷ ಕ್ಯೂಸೆಕ್ ನೀರು ಒಳಹರಿವು ಹೆಚ್ಚಾಗಿದೆ.

ಹಲವು ಗ್ರಾಮಗಳಿಗೆ ಮುಳುಗಡೆ ಭೀತಿ

ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ಅಪಾಯದ ಮಟ್ಟವನ್ನು ತಲುಪುತ್ತಿದ್ದು, 15,000 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಇದರಿಂದ ಹಲವಾರು ಗ್ರಾಮಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ. ಯಮನೂರು ಕಿರು ದರ್ಗಾ ಈಗಾಗಲೇ ಜಲಾವೃತವಾಗಿದ್ದು, ಬೀಳಗಿ ತಾಲೂಕಿನ ಗಲಗಲಿ, ಚೌಡಾಪುರ ಮತ್ತು ಬೂದಿಹಾಳ ಗ್ರಾಮಗಳಿಗೂ ಜಲಾತಂಕ ಎದುರಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:47 pm, Thu, 9 July 26

Source link

Leave a Reply

Your email address will not be published. Required fields are marked *