ಲಕ್ನೋ, ಆಗಸ್ಟ್ 06: ಉತ್ತರ ಪ್ರದೇಶದಾದ್ಯಂತ ಸುರಿಯುತ್ತಿರುವ ಭಾರಿ ಮಳೆ(Rain)ಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಯ ಗೋಡೆ ಕುಸಿದುಬಿದ್ದ ಪರಿಣಾಮ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಪ್ರತಾಪ್‌ಗಢ, ಬಾರಾಬಂಕಿ ಮತ್ತು ಸಹರಾನ್‌ಪುರ ಜಿಲ್ಲೆಗಳಲ್ಲಿ ಈ ಕರುಣಾಜನಕ ದುರಂತಗಳು ಸಂಭವಿಸಿವೆ. ಪ್ರತಾಪ್‌ಗಢ ಜಿಲ್ಲಾ ಕೇಂದ್ರದ ಬಳಿಯ ಮಹುಲಿ ಬಜಾರ್‌ನಲ್ಲಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಶತಮಾನದಷ್ಟು ಹಳೆಯದಾದ ಜರ್ಜರಿತ ಮನೆ ಕುಸಿದು ಬಿದ್ದಿದೆ.
ಘಟನೆಯಲ್ಲಿ ಪ್ರಮೋದ್ ಶ್ರೀವಾಸ್ತವ (60), ಅವರ ಪತ್ನಿ ರೀಟಾ (55), ಮಗ ನಿತಿನ್ (25), ಸೊಸೆ ಮಾಧುರಿ (24) ಹಾಗೂ ಇಬ್ಬರು ಸಣ್ಣ ಮಕ್ಕಳು ಸಾವನ್ನಪ್ಪಿದ್ದಾರೆ. ಮನೆಯ ಹಿರಿಯ ಮಗ ಅಮನ್ (28) ಅವಶೇಷಗಳ ಅಡಿಯಿಂದ ತೆವಳುತ್ತ ಹೊರಬಂದು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ತಕ್ಷಣ ಆರಂಭವಾಯಿತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ 6 ಮಂದಿ ಮೃತಪಟ್ಟಿದ್ದರು.
ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದ ಇಟ್ಟಿಗೆ ಗೋಡೆ: ಬಾರಾಬಂಕಿ ಜಿಲ್ಲೆಯ ಅಲಿಯಾಬಾದ್‌ನಲ್ಲಿ ರಸ್ತೆಬದಿ ಆಟವಾಡುತ್ತಿದ್ದ ಐದು ಮಕ್ಕಳ ಮೇಲೆ ಹಳೆಯ ಇಟ್ಟಿಗೆ ಗೋಡೆಯೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ 7 ವರ್ಷದ ಬಾಲಕ ಹಾಗೂ ಆತನ ೧೪ ವರ್ಷದ ಸಹೋದರಿ ಇಬ್ಬರೂ ಮೃತಪಟ್ಟಿದ್ದು, ಇತರ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮತ್ತಷ್ಟು ಓದಿ:
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ವರ: ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಸಹರಾನ್‌ಪುರದ ಘಾಘ್ರೇಕಿ ಗ್ರಾಮದಲ್ಲಿ ಭಾರಿ ಮಳೆಗೆ ಮಣ್ಣಿನ ಮನೆ ಕುಸಿದುಬಿದ್ದು, 34 ವರ್ಷದ ಮಹಿಳೆಯೊಬ್ಬರು ಅವಶೇಷಗಳ ಅಡಿಯಲ್ಲಿ ಸಿಲುಕಿ ಅಸಹಾಯಕರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ಪರಿಶೀಲಿಸುವಂತೆ ಮತ್ತು ಮೃತರ ಕುಟುಂಬಗಳಿಗೆ ಕಂದಾಯ ಇಲಾಖೆಯ ವತಿಯಿಂದ ತಕ್ಷಣವೇ ತುರ್ತು ಪರಿಹಾರ ಧನ ಬಿಡುಗಡೆ ಮಾಡಲು ಸೂಚನೆ ನೀಡಿದೆ.
ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸ್ಥಳೀಯ ನಗರಸಭೆ ಮತ್ತು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
