Headlines

ಉಪವಾಸ ನಿರತ ಹೋರಾಟಗಾರ ಸೋನಮ್ ವಾಂಗ್ಚುಕ್​ಗೆ ಬಲವಂತವಾಗಿ ದ್ರವಾಹಾರ ನೀಡಿ; ಹೈಕೋರ್ಟ್‌ಗೆ ತುರ್ತು ಅರ್ಜಿ – Kannada News | Plea in Delhi High Court seeks Force feed to Sonam Wangchuk on hunger strike

ನವದೆಹಲಿ, ಜುಲೈ 15: ಪ್ರಸಿದ್ಧ ಪರಿಸರ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಇಂದು 18ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. “ಅವರು ಹೀಗೆಯೇ ಉಪವಾಸ ಮುಂದುವರಿಸಿದರೆ ಇನ್ನೆರಡು ದಿನಗಳಿಗಿಂತ ಹೆಚ್ಚು ಕಾಲ ಬದುಕುವುದು ಅನುಮಾನ” ಎಂದು ಕಳವಳ ವ್ಯಕ್ತಪಡಿಸಿ ದೆಹಲಿ ಹೈಕೋರ್ಟ್‌ಗೆ ತುರ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಈ ಅರ್ಜಿಯ ತುರ್ತು ವಿಚಾರಣೆಯನ್ನು ನಾಳೆಗೆ (ಗುರುವಾರ) ಹೈಕೋರ್ಟ್ ನಿಗದಿಪಡಿಸಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (PIL) ಸೋನಮ್ ವಾಂಗ್ಚುಕ್ ಅವರ ಜೀವಕ್ಕೆ ಎದುರಾಗಿರುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ಹಲವು ದಿನಗಳಿಂದ ಆಹಾರ ಸೇವಿಸದೆ ಉಪವಾಸ ಮಾಡುತ್ತಿರುವುದರಿಂದ ಅವರ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದ್ದರಿಂದ ಅವರನ್ನು ತಕ್ಷಣವೇ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಬೇಕು. ಅವರ ಒಪ್ಪಿಗೆ ಇಲ್ಲದಿದ್ದರೂ, ಜೀವ ಉಳಿಸುವ ದೃಷ್ಟಿಯಿಂದ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರಿಗೆ ಬಲವಂತವಾಗಿ ಗ್ಲುಕೋಸ್ ಅಥವಾ ದ್ರವಾಹಾರವನ್ನು ನೀಡಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಅರ್ಜಿದಾರರು ವಿನಂತಿಸಿದ್ದಾರೆ.

ಇದನ್ನೂ ಓದಿ: ಉಪವಾಸ ಮಾಡಿದ್ದಕ್ಕೆ ಆಡಳಿತ ಬಂಧಿಸಿದೆ ಎಂದು ಆರೋಪಿಸಿದ ವಾಂಗ್ಚುಕ್; ಆರೋಪ ನಿರಾಕರಿಸಿದ ಲಡಾಖ್

ನೀಟ್ (NEET) ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 59 ವರ್ಷದ ಸೋನಮ್ ವಾಂಗ್ಚುಕ್ ಅವರು ಜೂನ್ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಯುವ ಸಂಘಟನೆಯಾದ ‘ಕಾಕ್ರೋಚ್ ಜನತಾ ಪಾರ್ಟಿ’ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಈ ಸತ್ಯಾಗ್ರಹ ಆರಂಭಿಸಿದ್ದಾರೆ.

ವಿಪರೀತ ತೂಕ ಇಳಿಕೆ:

ವಕೀಲ ರಾಕೇಶ್ ಕುಮಾರ್ ಸೈನಿ ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ ಹಲವು ಆಘಾತಕಾರಿ ಅಂಶಗಳನ್ನು ಉಲ್ಲೇಖಿಸಲಾಗಿದೆ. ಕಳೆದ 18 ದಿನಗಳ ಉಪವಾಸದಿಂದಾಗಿ ಸೋನಮ್ ವಾಂಗ್ಚುಕ್ ಅವರು ಈಗಾಗಲೇ ಸುಮಾರು 8.5 ಕೆಜಿ ತೂಕ ಕಳೆದುಕೊಂಡಿದ್ದು, ಅವರ ಶರೀರ ಸಂಪೂರ್ಣ ದುರ್ಬಲವಾಗಿದೆ. “ಅವರ ಜೀವ ಉಳಿಸಲು ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಮನುಷ್ಯನ ದೇಹ ಬದುಕಲು ಅಗತ್ಯವಿರುವ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ದ್ರವಾಹಾರದ ಮೂಲಕ ಬಲವಂತವಾಗಿ ನೀಡಬೇಕಾಗಿದೆ” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಕೋರ್ಟ್ ಕಣ್ಣೆದುರೇ ಸಾವು ಸಂಭವಿಸಬಾರದು:

“ಸಾರ್ವಜನಿಕ ಹಿತಾಸಕ್ತಿಗಾಗಿ ಶಾಂತಿಯುತ ಪ್ರತಿಭಟನೆ ಮಾಡುವುದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕು. ಈ ಹೋರಾಟದಲ್ಲಿ ಅವರು ಜೀವ ಕಳೆದುಕೊಂಡರೆ ಅದು ಇಡೀ ದೇಶಕ್ಕೆ ಮತ್ತು ಜಗತ್ತಿಗೆ ದೊಡ್ಡ ಅವಮಾನ. ದೇಶದ ನಾಗರಿಕನೊಬ್ಬ ತನ್ನ ಕಣ್ಣೆದುರೇ ಹಸಿವಿನಿಂದ ಸಾಯಲು ನ್ಯಾಯಾಲಯಗಳು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ,” ಎಂದು ಅರ್ಜಿದಾರರು ವಾದಿಸಿದ್ದಾರೆ.

ಇದನ್ನೂ ಓದಿ: Ladakh Protest: ಲಡಾಖ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕಾರಣಗಳೇನು?

ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್:

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತು. ಆದರೆ, ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಕಾರ್ಯಸ್ಥಗಿತದ ಕರೆ ಇದ್ದ ಕಾರಣ, ಸರ್ಕಾರದ ಪರವಾಗಿ ಯಾವುದೇ ವಕೀಲರು ಹಾಜರಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು, “ನಾವು ಈ ಅರ್ಜಿಯನ್ನು ಸ್ವೀಕರಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳು ಯಾರೂ ಹಾಜರಿಲ್ಲದ ಕಾರಣದಿಂದ ತಕ್ಷಣವೇ ಅವರಿಗೆ ಈ ಆದೇಶದ ಪ್ರತಿಯನ್ನು ತಲುಪಿಸುವಂತೆ ರಿಜಿಸ್ಟ್ರಿಗೆ ಸೂಚಿಸುತ್ತೇವೆ. ನಾಳೆಯೇ ಈ ವಿಷಯವನ್ನು ಮತ್ತೊಮ್ಮೆ ಪಟ್ಟಿ ಮಾಡಿ, ಸರ್ಕಾರದಿಂದ ಸೂಕ್ತ ಮಾಹಿತಿ ಪಡೆಯಲಾಗುವುದು” ಎಂದು ತಿಳಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಸದ್ಯಕ್ಕೆ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ದೆಹಲಿ ಹೈಕೋರ್ಟ್ ಈ ಅರ್ಜಿಯ ಕುರಿತು ಯಾವ ರೀತಿಯ ತುರ್ತು ಆದೇಶ ಹೊರಡಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *