ಬೆಂಗಳೂರು, ಜುಲೈ 10: ಕರ್ನಾಟಕ ರಾಜಕೀಯದಲ್ಲಿ ಇದೀಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಚರ್ಚೆ ಜೋರಾಗಿ ಆರಂಭವಾಗಿದೆ. ಸಚಿವರಾಗಿದ್ದ ಡಿ. ಸುಧಾಕರ್ ಅಕಾಲಿಕ ನಿಧನದಿಂದ ತೆರವಾಗಿರುವ ಈ ಕ್ಷೇತ್ರದ ಉಪಸಮರಕ್ಕೆ ಮುಹೂರ್ತ ನಿಗದಿಯಾಗುವ ಮುನ್ನವೇ ಮೂರೂ ಪಕ್ಷಗಳು ತೆರೆಮರೆಯ ರಾಜಕೀಯ ತಂತ್ರಗಾರಿಕೆ ಶುರು ಮಾಡಿವೆ. ಅದರಲ್ಲೂ ವಿಶೇಷವಾಗಿ ಜೆಡಿಎಸ್ (JDS) ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಮುಂಬರುವ ಉಪಚುನಾವಣೆಯಲ್ಲಿ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ವಿಜಯ ಪತಾಕೆ ಹಾರಿಸಲು ದಳಪತಿಗಳು ಈಗಿನಿಂದಲೇ ಚುನಾವಣಾ ಕೆಲಸಗಳನ್ನು ಆರಂಭಿಸಿದ್ದಾರೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಈಗಾಗಲೇ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸುವ ಬಗ್ಗೆ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದು, ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ.
ವೋಟ್ ಬ್ಯಾಂಕ್ ಲೆಕ್ಕಾಚಾರ ಮತ್ತು ಕುಮಾರಸ್ವಾಮಿ ಟಾಸ್ಕ್
2023ರ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ 38,000 ಮತಗಳನ್ನು ಪಡೆದಿದ್ದರೆ, ಬಿಜೆಪಿ 60,000 ಮತಗಳನ್ನು ಗಳಿಸಿತ್ತು. ಈಗ ಮೈತ್ರಿ ಏರ್ಪಟ್ಟಿರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಮತಗಳು ಒಟ್ಟಾದರೆ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರವಾಗಿದೆ. ಇದೇ ಕಾರಣಕ್ಕೆ ಚಿತ್ರದುರ್ಗ ಮತ್ತು ಹಿರಿಯೂರು ಭಾಗದ ಜೆಡಿಎಸ್ ಮುಖಂಡರೊಂದಿಗೆ ಎರಡು ಸುತ್ತಿನ ಸಭೆ ನಡೆಸಿರುವ ಕುಮಾರಸ್ವಾಮಿ, ‘ಟಿಕೆಟ್ ನಾನು ದೆಹಲಿಯಿಂದ ತರುತ್ತೇನೆ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು’ ಎಂದು ಸ್ಥಳೀಯ ನಾಯಕರಿಗೆ ಕಟ್ಟುನಿಟ್ಟಿನ ಟಾಸ್ಕ್ ನೀಡಿದ್ದಾರೆ.
ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗ ಮತ್ತು ಯಾದವ ಸಮುದಾಯಗಳ ಮತಗಳನ್ನು ಸೆಳೆಯಲು ಅದೇ ಸಮುದಾಯದ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ಲಾನ್ ಮಾಡಲಾಗಿದೆ. ಸದ್ಯಕ್ಕೆ ಗೆಲುವು-ಸೋಲಿಗಿಂತಲೂ ಹೆಚ್ಚಾಗಿ, ಈಗ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತಗೊಂಡರೆ ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಗೆ ಮೈತ್ರಿಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂಬ ದೂರದೃಷ್ಟಿ ದಳಪತಿಗಳದ್ದಾಗಿದೆ.
ಎನ್ಡಿಎ ಸನ್ನದ್ಧ, ಇಂದು ಜಂಟಿ ಸಭೆ
ಮತ್ತೊಂದೆಡೆ ಬಿಜೆಪಿ ಕೂಡ ಹಿರಿಯೂರು ಉಪಚುನಾವಣೆಗೆ ತನ್ನದೇ ಆದ ತಯಾರಿ ನಡೆಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈಗಾಗಲೇ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿ, ಸಂಘಟನಾ ಬಲ ಮತ್ತು ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಿದ್ದಾರೆ. ಈ ಮಧ್ಯೆ ಹಿರಿಯೂರು ಕ್ಷೇತ್ರದ ಮೈತ್ರಿ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ‘ಉಪಚುನಾವಣೆಗೆ ಮೈತ್ರಿಕೂಟ ಸಜ್ಜಾಗಿದೆ. ಶುಕ್ರವಾರ ಜೆಡಿಎಸ್ ನಾಯಕರೊಂದಿಗೆ ಜಂಟಿ ಸಭೆ ನಡೆಸಿ, ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ಮರಳುವ ಸುಳಿವು?
ಹಿರಿಯೂರು ಚುನಾವಣಾ ತಯಾರಿಯ ನಡುವೆಯೇ ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಲಿದ್ದಾರೆ ಎಂಬ ಚರ್ಚೆಗಳು ಜೆಡಿಎಸ್ ಪಾಳಯದಲ್ಲಿ ತೀವ್ರಗೊಂಡಿವೆ. ಕಳೆದ ಒಂದು ತಿಂಗಳಿನಿಂದ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ನಾನು ಈಗ ಕೇಂದ್ರ ಮಂತ್ರಿಯಾಗಿದ್ದೇನೆ ಮತ್ತು ಮುಂದಿನ ಮೂರು ವರ್ಷಗಳ ಕಾಲ ಸಂಸದನಾಗಿ ಇರುತ್ತೇನೆ. ಹಾಗಂತ ರಾಜ್ಯಕ್ಕೆ ಬರುವುದಿಲ್ಲ ಎಂದಲ್ಲ, ಸಮಯ ಬಂದಾಗ ಖಂಡಿತ ಮರಳುತ್ತೇನೆ’ ಎಂದು ಪರೋಕ್ಷ ಸುಳಿವು ನೀಡಿದ್ದಾರೆ. ಒಟ್ಟಾರೆಯಾಗಿ ಹಿರಿಯೂರು ಉಪಸಮರ ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗುತ್ತಿರುವುದಂತೂ ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
