ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎನ್ಎಸ್ ಶಂಕರ್ (NS Shankar) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ (Heart Attack) ಅವರು ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಪತ್ರಕರ್ತರೂ ಆಗಿದ್ದ ಶಂಕರ್ ಅವರು ಕನ್ನಡದ ಹೆಸರಾಂತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ‘ಉಲ್ಟಾ ಪಲ್ಟಾ’ (Ulta Palta) ರೀತಿಯ ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಖ್ಯಾತಿ ಅವರಿಗಿತ್ತು. ಎನ್ಎಸ್ ಶಂಕರ್ ಅವರ ನಿಧನದ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ಎನ್ಎಸ್ ಶಂಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮಲಗಿದ್ದಾಗಲೇ ಅವರು ಕೊನೆಯುಸಿರು ಎಳೆದರು ಎನ್ನಲಾಗಿದೆ. ಉತ್ತಮ ಬರಹಗಾರರಾಗಿದ್ದ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದರು. ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದ್ದರು.
‘ಪ್ರಜಾವಾಣಿ’, ‘ಮುಂಗಾರು’, ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದ ಎನ್.ಎಸ್. ಶಂಕರ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ‘ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ’ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
