ಎಂಗೇಜ್ಮೆಂಟ್ ಆದ ರಾತ್ರಿಯೇ ಯುವತಿ ಪ್ರಿಯತಮನೊಂದಿಗೆ ಪರಾರಿ!
ಹಾವೇರಿ, ಏಪ್ರಿಲ್ 26: ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ವಿವಾಹ ನಿಶ್ಚಿತಾರ್ಥ ನಡೆದ ಬೆನ್ನಲ್ಲೇ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಯುವತಿಯನ್ನು ಫುಸಲಾಯಿಸಿ ಲವ್ ಜಿಹಾದ್ಗೆ (Love Jihad) ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ನಡೆದಿದ್ದೇನು?
ಗ್ರಾಮದ 24 ವರ್ಷದ ಬಿ.ಕಾಂ ಪದವೀಧರೆ ಶಂಕ್ರಮ್ಮ ಕೆರಿಮತ್ತಿಹಳ್ಳಿ ನಾಪತ್ತೆಯಾದ ಯುವತಿ. ಶಂಕ್ರಮ್ಮನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಮೇ 11ಕ್ಕೆ ಮದುವೆಯೂ ನಿಶ್ಚಯವಾಗಿತ್ತು. ನಿಶ್ಚಿತಾರ್ಥ ನಡೆದ ರಾತ್ರಿ ಭಾವಿ ಪತಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದ ಯುವತಿ, ತಡರಾತ್ರಿ ಮನೆಯ ಹಿಂಬದಿಯ ಬಾಗಿಲಿನಿಂದ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕ ಈಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ. ಇದು ಲವ್ ಜಿಹಾದ್ ಪ್ರಯತ್ನ ಎಂದು ಕುಟುಂಬಸ್ಥರು ಹಾಗೂ ಹಿಂದೂಪರ ಸಂಘಟನೆಗಳು ಗಂಭೀರವಾಗಿ ಆರೋಪಿಸಿವೆ.
ಅಕ್ಕಿಆಲೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಯುವತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ ಇಬ್ರಾಹಿಂ, ಮದುವೆಯ ಸಿದ್ಧತೆ ನಡೆಯುತ್ತಿದ್ದಾಗಲೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಗಳ ನಾಪತ್ತೆಯಿಂದ ಕಂಗೆಟ್ಟ ತಾಯಿ, ನನ್ನ ಮಗಳನ್ನು ಹೇಗಾದರೂ ಮಾಡಿ ಮರಳಿ ಕರೆತನ್ನಿ ಎಂದು ಅಡೂರು ಪೊಲೀಸ್ ಠಾಣೆಯ ಮುಂದೆ ಕಣ್ಣೀರು ಹಾಕಿದ್ದಾರೆ.
ಹಿಂದೂಪರ ಸಂಘಟನೆಗಳ ಆಕ್ರೋಶ
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಂದೂಪರ ಸಂಘಟನೆಗಳು ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವ್ಯವಸ್ಥಿತ ‘ಲವ್ ಜಿಹಾದ್’ ಎಂದು ಕಿಡಿಕಾರಿವೆ. ಸದ್ಯ ಅಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವತಿ ಹಾಗೂ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
