ನವದೆಹಲಿ, ಆಗಸ್ಟ್ 7: ನಿರ್ದಿಷ್ಟ ಯುಪಿಐ ವಹಿವಾಟುಗಳಿಗೆ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ವಿಧಿಸಲು ಸರ್ಕಾರ ಸಜ್ಜಾಗಿದೆ ಎಂದು ಮೂಲಗಳಿಂದ ಮಾಹಿತಿ ಪಡೆದು ಬ್ಯುಸಿನೆಸ್ ಟುಡೆ ಎಕ್ಸ್ಕ್ಲೂಸಿವ್ ವರದಿ ಪ್ರಕಟಿಸಿದೆ. ಈ ವರದಿ ಪ್ರಕಾರ ಯುಪಿಐ ವಹಿವಾಟುಗಳ ಸಂಬಂಧ ಸರ್ಕಾರ ಹಾಗೂ ಆರ್ಬಿಐ ಹೊಸ ನೀತಿಯನ್ನು ರೂಪಿಸಲು ಚಿಂತನೆ ನಡೆಸಿವೆ. ದೊಡ್ಡ ವ್ಯಾಪಾರಿಗಳಿಗಷ್ಟೇ ಯುಪಿಐ ವಹಿವಾಟು ಮೇಲೆ ಎಂಡಿಆರ್ ಶುಲ್ಕ ಅನ್ವಯಿಸಬಹುದು. ಅದೂ ಬಹಳ ಅಲ್ಪ ಪ್ರಮಾಣದ ಶುಲ್ಕ ಇರಲಿದೆ ಎಂದು ಈ ವರದಿ ಹೇಳುತ್ತಿದೆ.
ದೊಡ್ಡ ವ್ಯಾಪಾರಿಗಳ ಮೇಲೆ ಎಂಡಿಆರ್ ಶುಲ್ಕ
ಪ್ರಸ್ತಾವಿತ ಹೊಸ ಚೌಕಟ್ಟಿನಡಿಯಲ್ಲಿ, ದೊಡ್ಡ ಪ್ರಮಾಣದ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ (Large Merchants) ಯುಪಿಐ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR – Merchant Discount Rate) ವಿಧಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: 2050ರಲ್ಲಿ ಭಾರತ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗಲಿದೆ: ಅಧ್ಯಯನ ವರದಿ
ಸಣ್ಣ ವ್ಯಾಪಾರಿಗಳು (Small Merchants) ಹಾಗೂ ಸಾಮಾನ್ಯ ಗ್ರಾಹಕರಿಗೆ ಯುಪಿಐ ವಹಿವಾಟುಗಳು ಮೊದಲಿನಂತೆಯೇ ಉಚಿತವಾಗಿರಲಿವೆ.
ಡಿಜಿಟಲ್ ಪಾವತಿ ವ್ಯವಸ್ಥೆಯ ಸುಸ್ಥಿರತೆ: ಯುಪಿಐ ಪಾವತಿ ಮೂಲಸೌಕರ್ಯ ನಿರ್ವಹಣೆ ಮತ್ತು ಸುರಕ್ಷತೆಗಾಗಿ ಬ್ಯಾಂಕುಗಳು ಹಾಗೂ ಪಾವತಿ ಸೇವಾ ಪೂರೈಕೆದಾರರು (Payment Service Providers) ಎದುರಿಸುತ್ತಿರುವ ವೆಚ್ಚವನ್ನು ಭರಿಸಲು ಮತ್ತು ಈ ವ್ಯವಸ್ಥೆಯನ್ನು ಆರ್ಥಿಕವಾಗಿ ಸುಸ್ಥಿರಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ದೊಡ್ಡ ವ್ಯಾಪಾರಿಗಳೆಂದರೆ ಯಾರು? ಶೇ. 0.04 ಮಾತ್ರವಾ ಶುಲ್ಕ?
ವಾರ್ಷಿಕವಾಗಿ 4 ಕೋಟಿ ರೂಗಿಂತಲೂ ಹೆಚ್ಚಿನ ಪ್ರಮಾಣದ ವ್ಯಾಪಾರ ಹೊಂದಿರುವ ದೊಡ್ಡ ವ್ಯಾಪಾರಿಗಳಿಗೆ ಈ ಎಂಡಿಆರ್ ಶುಲ್ಕ ವಿಧಿಸಬಹುದು ಎನ್ನಲಾಗುತ್ತಿದೆ. ಆದರೆ, ಈ ಶುಲ್ಕ ಬಹಳ ಕಡಿಮೆ ಪ್ರಮಾಣದಲ್ಲಿರಲಿದೆ. ಶೇ. 0.04 ಎಂಡಿಆರ್ ಶುಲ್ಕದ ಪ್ರಸ್ತಾಪ ಇದೆ. ಅಂದರೆ, ನೂರು ರುಪಾಯಿಗೆ 4 ಪೈಸೆ ಮಾತ್ರ. ಒಂದು ಲಕ್ಷ ರುಪಾಯಿ ಟ್ರಾನ್ಸಾಕ್ಷನ್ಗೆ 40 ರುಪಾಯಿ ಶುಲ್ಕ ಇರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ನಲ್ಲಿ ಎರಡು ಬಾರಿ ಹೆಸರು ತಿದ್ದುಪಡಿ ಮಾಡಿದ್ರೂ ತಪ್ಪಿದ್ಯಾ? ಹಾಗಾದ್ರೆ ಹೀಗೆ ಮಾಡಿ
ಯುಪಿಐ ವಹಿವಾಟು ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಸಾಧ್ಯತೆ ಬಗ್ಗೆ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಇತ್ತೀಚೆಗಷ್ಟೇ ಸುಳಿವು ನೀಡಿರುವುದುಂಟು. ಸಾಮಾನ್ಯ ಯುಪಿಐ ಬಳಕೆದಾರರಿಗೆ ಶುಲ್ಕ ಇರುವುದಿಲ್ಲವಾದರೂ ದೊಡ್ಡ ವ್ಯಾಪಾರಿಗಳು ತಮ್ಮ ಲಾಭನಷ್ಟವನ್ನು ಗ್ರಾಹಕರ ಮೇಲೆ ಹೊರಿಸುವ ಸಾಧ್ಯತೆಯಂತೂ ಇದ್ದೇ ಇರುತ್ತದೆ. ಯಾರಿಗೇ ಎಂಡಿಆರ್ ಶುಲ್ಕ ವಿಧಿಸಿದರೂ ಅದು ಅಂತಿಮವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಬಹುದು. ಆದರೂ ಯುಪಿಐ ಪೇಮೆಂಟ್ ಇಕೋಸಿಸ್ಟಂನ ಉಳಿವಿಗಾಗಿ ಯಾವುದಾದರೂ ಶುಲ್ಕ ಹಾಕುವುದು ಅನಿವಾರ್ಯ ಎನ್ನುವ ಅಭಿಪ್ರಾಯಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
