ಎಟಿಎಂ ಮೆಷಿನ್ ಕಾರಿಗೆ ಕಟ್ಟಿ ಎಳೆದೊಯ್ದ ಗ್ಯಾಂಗ್,ಮೂರೇ ನಿಮಿಷದಲ್ಲಿ ಹಣ ದೋಚಿದ ದುಷ್ಕರ್ಮಿಗಳು – Kannada News | Balasore ATM Heist: Gang Drags Machine with Car, Steals Cash in 3 Minutes

ಬಾಲಸೋರ್, ಜುಲೈ 12: ಸಾಮಾನ್ಯ ದರೋಡೆಕೋರರು ಎಟಿಎಂ(ATM) ಅನ್ನು ಒಡೆದು ಹಣ ಕದಿಯುವುದು ಸಾಮಾನ್ಯ, ಆದರೆ ಈ ದುಷ್ಕರ್ಮಿಗಳ  ಗ್ಯಾಂಗ್ ನೇರವಾಗಿ ಎಟಿಎಂ ಯಂತ್ರವನ್ನೇ ಕದ್ದುಕೊಂಡು ಹೋಗಿದ್ದಾರೆ. ಒಡಿಶಾದ ಬಾಲಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಈಗ ಭಾರೀ ಚರ್ಚೆಯಾಗುತ್ತಿದೆ. ಶನಿವಾರ ಬೆಳಗಿನ ಜಾವ 2 ಗಂಟೆ ಸಮಯ. ಜನಸಂಚಾರವಿಲ್ಲದ ಸಮಯವನ್ನು ನೋಡಿ ಐದಕ್ಕೂ ಹೆಚ್ಚು ದುಷ್ಕರ್ಮಿಗಳು ಕಪ್ಪು ಬಣ್ಣದ ಕಾರಿನಲ್ಲಿ ಎಟಿಎಂ ಕೇಂದ್ರದ ಬಳಿ ಬಂದು ನಿಂತರು.

ಬೆಳಗಿನ ಜಾವ 2.14 ಗಂಟೆ ವೇಳೆಗೆ ದುಷ್ಕರ್ಮಿಗಳು ವಾಹನದಿಂದ ಇಳಿದು, ಎಟಿಎಂ ಕಿಯೋಸ್ಕ್ ಒಳಗೆ ನುಗ್ಗಿ, ಭಾರವಾದ ಹಗ್ಗದ ಒಂದು ತುದಿಯನ್ನು ಎಟಿಎಂ ಯಂತ್ರಕ್ಕೆ ಮತ್ತು ಮತ್ತೊಂದು ತುದಿಯನ್ನು ತಮ್ಮ ಕಾರಿಗೆ ಗಟ್ಟಿಯಾಗಿ ಕಟ್ಟಿದ್ದಾರೆ. ಕಾರನ್ನು ಅತಿವೇಗವಾಗಿ ಮುಂದಕ್ಕೆ ಚಲಾಯಿಸಿದ ತಕ್ಷಣ, ಆ ಬಲಕ್ಕೆ ಎಟಿಎಂ ಯಂತ್ರ ಕಿತ್ತು ಬಂತು. ಎಟಿಎಂ ಅಳವಡಿಸಿದ್ದ ಕಿಯೋಸ್ಕ್ ಸಂಪೂರ್ಣ ಛಿದ್ರವಾಗಿತ್ತು. ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಈ ಕಾರ್ಯಾಚರಣೆ ಮುಗಿಸಿದ ಗ್ಯಾಂಗ್, ಕಿತ್ತುಕೊಂಡ ಯಂತ್ರವನ್ನು ತಮ್ಮ ವಾಹನಕ್ಕೆ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ದೌಡಾಯಿಸಿತು. ಅಲ್ಲಿ ಯಂತ್ರವನ್ನು ಒಡೆದು ಒಳಗಿದ್ದ ನಗದನ್ನು ದೋಚಿ ಪರಾರಿಯಾಯಿತು.

ಈ ಇಡೀ ದರೋಡೆಯ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಕಪ್ಪು ಬಣ್ಣದ ಥಾರ್ ಕಾರು ಎಟಿಎಂನ ಮುಂದೆ ಬಂದು ನಿಲ್ಲುವುದು, ಕಳ್ಳರು ಹಗ್ಗ ಕಟ್ಟುವುದು, ಯಂತ್ರವನ್ನು ಕಿತ್ತುಕೊಂಡು ಓಡಿಹೋಗುವುದು ಎಲ್ಲವೂ ಸಿನಿಮಾದ ಸ್ಟಂಟ್ ದೃಶ್ಯದಂತೆಯೇ ಇದೆ. ಪೊಲೀಸರು ಈ ವಿಡಿಯೋವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಡಿಯೋ

ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಕಳೆದ ಕೆಲ ತಿಂಗಳುಗಳಿಂದ ಬಾಲಸೋರ್ ಜಿಲ್ಲೆಯ ಈ ಭಾಗದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಎಟಿಎಂ ಮೆಷಿನ್ ಅನ್ನೇ ಎಳೆದುಕೊಂಡು ಹೋಗುವಷ್ಟು ಧೈರ್ಯ ತೋರಿಸುತ್ತಿರುವ ಕಳ್ಳರ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಭದ್ರತೆಯನ್ನು ಬಿಗಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಎಟಿಎಂಗೆ ಹಾಕಲು ಕೊಟ್ಟಿದ್ದ 1 ಕೋಟಿ ರೂ.ಗೂ ಅಧಿಕ ಹಣದೊಂದಿಗೆ ಸಿಬ್ಬಂದಿಯೇ ಪರಾರಿ!

ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿಯಲ್ಲಿ ಕಾಣಿಸಿದ ಥಾರ್ ವಾಹನದ ನಂಬರ್ ಪ್ಲೇಟ್ ಮತ್ತು ದಾಳಿಕೋರರನ್ನು ಗುರುತಿಸಲು ತೀವ್ರ ಶೋಧ ನಡೆಸುತ್ತಿದ್ದಾರೆ.

Published On – 12:25 pm, Sun, 12 July 26

Source link

Leave a Reply

Your email address will not be published. Required fields are marked *