ವಿವಿಧ ಮದ್ಯದ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆImage Credit source: AI Image
ಬೆಂಗಳೂರು, ಏಪ್ರಿಲ್ 19: ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಈ ಆಧಾರದಲ್ಲಿ ಕರ್ನಾಟಕದಲ್ಲಿ ಸಾಮಾನ್ಯ ಜನರು ಸೇವಿಸುವ ಮದ್ಯಗಳಾದ ವಿಸ್ಕಿ, ರಮ್, ಜಿನ್, ಬ್ರಾಂಡಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಶೀಘ್ರದಲ್ಲೇ ಕನಿಷ್ಠ ಶೇ.20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ವ್ಯವಸ್ಥೆಯ ನಿಯಮದಂತೆ ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ (AIB) ಹೆಚ್ಚು ಇದ್ದರೆ ತೆರಿಗೆಯೂ ಹೆಚ್ಚಾಗಲಿದೆ. ಹೀಗಾಗಿ ಕರ್ನಾಟಕದಲ್ಲಿ ತಯಾರಾಗುವ ಇಂಡಿಯನ್ ಮೇಡ್ ಲಿಕರ್ ಬೆಲೆಯ ಮೇಲೂ ಇದು ಪರಿಣಾಮ ಬೀರಲಿದೆ.
ಈಗಾಗಲೇ MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಯಾದಲ್ಲಿಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯ ಹೆಚ್ಚು ದುಬಾರಿ ಆಗಲಿದೆ. ಈ ವಿಭಾಗದ ಮದ್ಯಗಳಲ್ಲಿ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ. 42.8ರಷ್ಟಿದೆ. ಇವೇ ನಾಲ್ಕು ಸ್ಲ್ಯಾಬ್‌ಗಳು ಒಟ್ಟು ಎಕ್ಸೈಸ್ ಆದಾಯದಲ್ಲಿ ಶೇ.80ರಷ್ಟು ಪಾಲು ಹೊಂದಿದ್ದು, ಕಳೆದ ವರ್ಷ 180 ಮಿಲಿ ಮದ್ಯದ ಬೆಲೆ 80ರಿಂದ 95 ರೂಪಾಯಿಗೆ ಏರಿಕೆಯಾಗಿತ್ತು. ಆದರೆ ಹೊಸ ತೆರಿಗೆ ವ್ಯವಸ್ಥೆಯ ನಂತರ 105-110ರೂಪಾಯಿವರೆಗೆ ದರ ಏರಿಕೆಯಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ ಸಿದ್ದರಾಮಯ್ಯ; ಬಜೆಟ್ನಲ್ಲಿ ಮಹತ್ವದ ನಿರ್ಧಾರ
ಸರ್ಕಾರವು ಆರು ದಶಕಗಳ ಹಳೆಯ ಮದ್ಯ ತೆರಿಗೆ ನೀತಿಯಲ್ಲಿ ತಿದ್ದುಪಡಿ ಮಾಡಲು ಶನಿವಾರ ಕರಡು ಅಧಿಸೂಚನೆ ಹೊರಡಿಸಿದ್ದು, ಇದು ಜಾರಿಯಾದಲ್ಲಿ ಆಲ್ಕೋಹಾಲ್-ಇನ್-ಬೇವರೇಜ್ (AIB) ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ವ್ಯವಸ್ಥೆ ಇದ್ದರೂ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮದ್ಯದ ಪ್ರಮಾಣದ ಬದಲಿಗೆ ಅದರಲ್ಲಿನ ನಿಜವಾದ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸುವ ಕ್ರಮಕ್ಕೆ ರಾಜ್ಯ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರಸಾ, ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ನಾಲ್ಕು ಸ್ಲ್ಯಾಬ್‌ಗಳಲ್ಲಿ ಬರುವ ಮದ್ಯ ಸಾಮಾನ್ಯ ಜನರಿಗೆ ಲಭ್ಯವಾಗುವಂತಹದ್ದು. ಇದರ ಬೆಲೆ ಏರಿಕೆಯಿಂದ ಮಾರುಕಟ್ಟೆಯ ಮೇಲೆ ಪರಿಣಾಮ ಉಂಟಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಅಂತಿಮ ಅಧಿಸೂಚನೆಗೂ ಮುನ್ನ ಸರ್ಕಾರ ನಮ್ಮ ಸಲಹೆಗಳನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 12:17 pm, Sun, 19 April 26
