
ಲಾಹೋರ್, ಏ. 04: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಎಷ್ಟು ತಾರಕಕ್ಕೇರಿದೆ ಎಂದರೆ, ಅಲ್ಲಿನ ಸರ್ಕಾರ ಈಗ ಜಾನುವಾರುಗಳ ತ್ಯಾಜ್ಯಕ್ಕೂ ತೆರಿಗೆ ವಿಧಿಸಲು ಮುಂದಾಗಿದೆ. ಮುಖ್ಯಮಂತ್ರಿ ಮರಿಯಮ್ ನವಾಜ್ ನೇತೃತ್ವದ ಆಡಳಿತವು ಪ್ರತಿ ಎಮ್ಮೆಗೆ ದಿನಕ್ಕೆ 30 ಪಾಕಿಸ್ತಾನಿ ರೂಪಾಯಿ (PKR 30) ‘ಗೋಬರ್ ಟ್ಯಾಕ್ಸ್’ (ಸಗಣಿ ತೆರಿಗೆ) ವಿಧಿಸುವುದಾಗಿ ಘೋಷಿಸಿದೆ.
ಸರ್ಕಾರವು ಈ ಕ್ರಮವನ್ನು ‘ಸುತ್ರಾ ಪಂಜಾಬ್’ (ಸ್ವಚ್ಛ ಪಂಜಾಬ್) ಬಯೋಗ್ಯಾಸ್ ಕಾರ್ಯಕ್ರಮದ ಅಡಿಯಲ್ಲಿ ಜಾರಿಗೆ ತರುತ್ತಿದೆ. ಪ್ರಾಂತ್ಯದಾದ್ಯಂತ ಇರುವ 168 ಜಾನುವಾರು ಕಾಲನಿಗಳನ್ನು ಗುರುತಿಸಲಾಗಿದ್ದು, ಅಲ್ಲಿನ ಪ್ರತಿ ಎಮ್ಮೆಯ ಸಗಣಿಯನ್ನು ಸಂಗ್ರಹಿಸಿ ಬಯೋಗ್ಯಾಸ್ ಉತ್ಪಾದಿಸಲು ಮತ್ತು ನಗರದ ನೈರ್ಮಲ್ಯ ಕಾಪಾಡಲು ಈ ತೆರಿಗೆಯನ್ನು ಬಳಸಲಾಗುವುದು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಈ ಹೊಸ ತೆರಿಗೆಯು ರೈತರಿಗೆ ಭಾರಿ ಹೊರೆಯಾಗಲಿದೆ. ಒಂದು ಎಮ್ಮೆಗೆ ದಿನಕ್ಕೆ 30 ರೂಪಾಯಿಯಂತೆ ಲೆಕ್ಕ ಹಾಕಿದರೆ, ವರ್ಷಕ್ಕೆ ಸುಮಾರು 11,000 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಈಗಾಗಲೇ ಪಶು ಆಹಾರದ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮತ್ತು ಹಣದುಬ್ಬರದಿಂದ ಕಂಗಾಲಾಗಿರುವ ಸಣ್ಣ ರೈತರು ಈ ನಿರ್ಧಾರದಿಂದ ಕಂಗೆಟ್ಟಿದ್ದಾರೆ.
ಇದನ್ನೂ ಓದಿ: ಆಮೇಲೆ ಶಾಂತಿ ಜಪ ಮಾಡಿ, ಮೊದಲು ನಮ್ಮ ಸಾಲ ವಾಪಸ್ ಕೊಡಿ ಎಂದು ಪಾಕಿಸ್ತಾನವನ್ನು ಕೇಳಿದ ಯುಎಇ
“ಇದು ಸರ್ಕಾರದ ದಿವಾಳಿತನದ ಪರಮಾವಧಿ” ಎಂದು ವಿರೋಧ ಪಕ್ಷಗಳು ಟೀಕಿಸಿವೆ. ರಾಜ್ಯದಲ್ಲಿ ಆದಾಯ ಸಂಗ್ರಹಿಸಲು ಬೇರೆ ಯಾವುದೇ ದಾರಿ ಇಲ್ಲದೆ ಈಗ ಎಮ್ಮೆಗಳ ಸಗಣಿಯನ್ನು ಅಳತೆ ಮಾಡುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದು ಲೇವಡಿ ಮಾಡಲಾಗಿದೆ. ಶ್ರೀಮಂತ ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಬಡ ರೈತನ ಮೇಲೆ ಈ ರೀತಿ ತೆರಿಗೆ ಹೇರಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ