ನಟ ಚೇತನ್ ಅಹಿಂಸ, ಡಾ ರಾಜ್ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಆಡಿರುವ ಅಸೂಕ್ಷ್ಮ ಮಾತುಗಳು ತೀವ್ರ ಟೀಕೆಗೆ, ನಿಂದನೆಗೆ ಗುರಿ ಆಗಿವೆ. ಕನ್ನಡಪರ ಸಂಘಟನೆಗಳು, ಅಣ್ಣಾವ್ರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ಸಹ ನಡೆಸಿದ್ದಾರೆ. ಹಲವು ವಿಚಾರವಾದಿಗಳು, ಸಾಹಿತಿಗಳು ಸಹ ಚಿತ್ರರಂಗ ಹಾಗೂ ಕರ್ನಾಟಕಕ್ಕೆ ಅಣ್ಣಾವ್ರ ಕೊಡುಗೆಯನ್ನು ವಿವರಿಸಿದ್ದಾರೆ. ಇದೀಗ ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರರಂಗಕ್ಕೆ ಅಣ್ಣಾವ್ರ ಮಹತ್ವದ ಕೊಡುಗೆಯನ್ನು ವಿವರಿಸಿರುವ ಜೊತೆಗೆ ಚೇತನ್ ಅಹಿಂಸ ಹೇಳಿಕೆಯನ್ನು ಟೀಕೆ ಮಾಡಿದ್ದಾರೆ.
‘ಹೋದವರೆಲ್ಲಾ ಒಳ್ಳೆಯವರು ನಮ್ಮ ಹಿರಿಯರು, ಆ ಹಿರಿಯರಲ್ಲಿ ನಮ್ಮ ತಂದೆ ತಾಯಿ ತಾತ ಅಜ್ಜಿ ವಂಶದ ಪರಂಪರೆಯೇ ಸೇರಿರುತ್ತದೆ ಅಲ್ಲವೆ? ಹಿರಿಯರು ಎಂದ ಮೇಲೆ ನಮ್ಮ ಮನೆಯವರೆ ಅಲ್ಲಾ ಸಂಬಂದಿಗಳು ಅಥವ ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ನಮ್ಮ ವಂಶದ ಹಿರಿಯರ ಸಮ ಅಲ್ಲವೆ? ಇದು ಹೇಳುವ ಕಾರಣ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು, ಮನಸ್ಸಿಗೆ ಬಹಳ ನೋವುಂಟು ಮಾಡಿತು. ಆತನಿಗೆ ನನ್ನ ಕಿವಿಮಾತು 1954ರಲ್ಲಿ ಕನ್ನಡ ಚಿತ್ರರಂಗಕ್ಕೆ ನೆಲೆ ಬೆಲೆ ಇಲ್ಲದ ಕಾಲ. ಇರಲು ಸೂರಿಲ್ಲಾ ಉದರಕ್ಕೆ ತೃಪ್ತ ಆಹಾರವಿಲ್ಲಾ ಅಂಥಹ ಸಮಯದಿಂದ ಕನ್ನಡ ಚಿತ್ರರಂಗ ಕಟ್ಟಿ ಬೆಳೆಸಿ ಅರಮನೆಯಂತೆ ಮಾಡಿ ಹೋಗಿದ್ದಾರೆ.’ ಎಂದಿದ್ದಾರೆ ಜಗ್ಗೇಶ್.
‘ಇಂದು ಅದರ ಬೆಲೆ ಅರಿಯದೆ ಒಂದು ಅಥವ ಎರಡು ಚಿತ್ರಕ್ಕೆ ಜಗದೇಕವೀರರಂತೆ ಮಾತಾಡಿ ಮಲೀನವಾಗೋ ಸಂಪ್ರದಾಯ ಹುಟ್ಟಿ ಹಿರಿಯರೆಲ್ಲಾ ಮೂಖರಂತೆ ಯಾರ ತಂಟೆ ಬೇಡವೆಂದು ಉಳಿದುಬಿಟ್ಟಿದ್ದಾರೆ. ದ್ವನಿ ಎತ್ತಿದರೆ ಸರ್ಕಾರ ಬದಲಾಗುತ್ತಿತ್ತು ಅದು ರಾಜಣ್ಣನ ತಾಕತ್ತು, ಅಂಥಹ ಸಾಧಕ ಹೋದಾಗ ಇಡಿ ಚಿತ್ರರಂಗ ಸರ್ಕಾರ ಒಟ್ಟುಗೂಡಿ ಅವರ ಶ್ರಮಕ್ಕೆ ಗೌರವ ನೀಡಲು ಅವರ ಕೊನೆಯ ಚಿರನಿದ್ರೆಗೆ ಕಲಾವಿದರ ರಂಗಸ್ಥಳವನ್ನ ಪ್ರೀತಿಯ ಹಾಸಿಗೆ ಮಾಡಿ ಮಲಗಿಸಿದ್ದಾರೆ’ ಎಂದಿದ್ದಾರೆ ನಟ ಜಗ್ಗೇಶ್.
‘ಕಳೆದುಹೋದ ಸಮಯ ವಿಷಯ ಪ್ರಚಾರಕ್ಕಾಗಿ ಈಗ ಮಾತಾಡುವ ಚಿಕ್ಕಮನಸ್ಸು ಕಂಡು ಅಸಹ್ಯವಾಯಿತು. ಉತ್ತಮ ಚಿತ್ರಮಾಡಿ ಪ್ರೇಕ್ಷಕರ ರಂಜಿಸಿ ಹೆಸರುಮಾಡಿ (ಪ್ರೇಕ್ಷಕ ಇಷ್ಟಪಟ್ಟರೆ), ಇಲ್ಲದಿದ್ದರೆ ಗಳಿಸಿದ ಅಲ್ಪ ಹೆಸರು ಮಾಸಿ ಜೀವನ ರೋಸಿ ಹೋಗುತ್ತದೆ’ ಎಂದು ನಟ ಜಗ್ಗೇಶ್ ಕಿವಿಮಾತನ್ನು ನಟ ಚೇತನ್ ಅಹಿಂಸ ಕುರಿತು ಹೇಳಿದ್ದಾರೆ.
ಡಾ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿ ಜಗ್ಗೇಶ್. ಸಾಮಾಜಿಕ ಜಾಲತಾಣದಲ್ಲಿ ರಾಜ್ಕುಮಾರ್ ಅವರ ಕುರಿತು ಹಲವು ಅಪರೂಪದ ಸಂಗತಿಗಳನ್ನು ಜಗ್ಗೇಶ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಚೇತನ್ ಅಹಿಂಸ ಆಡಿರುವ ಮಾತುಗಳು ಸಹಜವಾಗಿಯೇ ಅವರಿಗೆ ನೋವುಂಟು ಮಾಡಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
