
ನವದೆಹಲಿ/ಬೆಂಗಳೂರು, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧದ ಪರಿಣಾಮ ಭಾರತದಲ್ಲಿ (India) ಎಲ್ಪಿಜಿ (LPG) ಗ್ಯಾಸ್ ಕೊರತೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಎದುರಾಗಿದೆ. ಇದುವರೆಗೆ ಹೊರ್ಮುಝ್ ಜಲಸಂಧಿ ಸಮಸ್ಯೆಯಿಂದ ಅಡಚಣೆ ಉಂಟಾಗಿದೆ ಎನ್ನಲಾಗುತ್ತಿತ್ತು. ಆ ಮಾರ್ಗದ ಮೂಲಕ ಗ್ಯಾಸ್ ತುಂಬಿದ ಹಡಗುಗಳು ಬರುವಂತೆ ಮಾಡಲು ಕೇಂದ್ರ ಸರ್ಕಾರ ಹೇಗೋ ವ್ಯವಸ್ಥೆ ಮಾಡಿದೆ. ಆದರೆ ಇದೀಗ ಗಲ್ಫ್ ರಾಷ್ಟ್ರಗಳ ತೈಲ ಹಾಗೂ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿಗಳಿಂದ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ಗಲ್ಫ್ ಪ್ರದೇಶದ ಅನೇಕ ತೈಲ ಹಾಗೂ ಗ್ಯಾಸ್ ಘಟಕಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ವರದಿಗಳಾಗಿವೆ. ಸೌದಿ ಅರೇಬಿಯಾದ ಅರಾಮ್ಕೋ, ಕತಾರ್ನ ರಾಸ್ ಲಫಾನ್ ಅನಿಲ ಘಟಕ ಸೇರಿದಂತೆ ಪ್ರಮುಖ ಉತ್ಪಾದನಾ ಕೇಂದ್ರಗಳು ಹಾನಿಗೊಳಗಾಗಿದ್ದು, ಉತ್ಪಾದನೆ ಮತ್ತು ಪೂರೈಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಕತಾರ್ನ ‘ಪರ್ಲ್ ಜಿಟಿಎಲ್’ ಘಟಕ ಸ್ಥಗಿತ
ವಿಶೇಷವಾಗಿ, ಜಗತ್ತಿನ ಅತಿದೊಡ್ಡ ಗ್ಯಾಸ್ ಟು ಲಿಕ್ವಿಡ್ ಘಟಕಗಳಲ್ಲಿ ಒಂದಾದ ಕತಾರ್ನ ‘ಪರ್ಲ್ ಜಿಟಿಎಲ್’ ಘಟಕ ಸ್ಥಗಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತಕ್ಕೆ ಕತಾರ್ ಪ್ರಮುಖ ಎಲ್ಪಿಜಿ ಮತ್ತು ಎಲ್ಎನ್ಜಿ ಪೂರೈಕೆದಾರ ರಾಷ್ಟ್ರವಾಗಿದ್ದು, ಭಾರತದ ಒಟ್ಟು ಗ್ಯಾಸ್ ಅವಶ್ಯಕತೆಯ ಶೇ 50ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.
ಕತಾರ್-ಭಾರತ ಮಧ್ಯೆ ಹೆಚ್ಚಿನ ವಹಿವಾಟು
ಪೆಟ್ರೋನೆಟ್ LNG ಮತ್ತು ಸರ್ಕಾರಿ ಸ್ವಾಮ್ಯದ GAIL ಕಂಪನಿಗಳು ಕತಾರ್ ಜತೆ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿವೆ. ಪೆಟ್ರೋನೆಟ್ಗೆ ವರ್ಷಕ್ಕೆ 7.5 ಮಿಲಿಯನ್ ಟನ್ LNG ಪೂರೈಕೆ ಆಗುತ್ತಿದ್ದು, ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಗೆ 5 ಮಿಲಿಯನ್ ಮೆಟ್ರಿಕ್ ಟನ್ LPG ನೀಡಲಾಗುತ್ತದೆ. 2024-25ರಲ್ಲಿ ಕತಾರ್ ಭಾರತಕ್ಕೆ 6.39 ಬಿಲಿಯನ್ ಡಾಲರ್ ಮೌಲ್ಯದ LNG ಹಾಗೂ 3.21 ಬಿಲಿಯನ್ ಡಾಲರ್ ಮೌಲ್ಯದ LPG ರಫ್ತು ಮಾಡಿತ್ತು.
ಇದಲ್ಲದೆ, ಸೌದಿ ಅರೇಬಿಯಾದ ಯಾನ್ಬು ಪ್ರದೇಶದಲ್ಲಿರುವ SAMREF ತೈಲ ಸಂಸ್ಕರಣಾ ಘಟಕದ ಮೇಲಿನ ದಾಳಿಯಿಂದ ತೈಲ ಪೂರೈಕೆಯ ಮೇಲೂ ಪರಿಣಾಮ ಬಿದ್ದಿದೆ. ಹೊರ್ಮುಝ್ ಜಲಸಂಧಿ ಭಾಗಶಃ ಅಸ್ತವ್ಯಸ್ತವಾಗಿರುವ ಹಿನ್ನೆಲೆ, ಪರ್ಯಾಯ ಮಾರ್ಗಗಳಿಂದ ಸಾಗುತ್ತಿದ್ದ ತೈಲ ಪೂರೈಕೆಯೂ ಈಗ ಅಡಚಣೆಗೆ ಒಳಗಾಗಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ?
ಈ ಬೆಳವಣಿಗೆಗಳ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 119 ಡಾಲರ್ವರೆಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಭೀತಿ ಎದುರಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಎಲ್ಪಿಜಿ ಕೊರತೆಯಿಂದ ಹೋಟೆಲ್ ಉದ್ಯಮ ತತ್ತರಿಸಿ ಹೋಗಿದ್ದು, ಹಲವೆಡೆ ಹೋಟೆಲ್ಗಳು ಬಾಗಿಲು ಮುಚ್ಚಿವೆ. ಕೈಗಾರಿಕೆಗಳು ಮತ್ತು ಸಣ್ಣ ಉದ್ಯಮಗಳ ಮೇಲೂ ಪರಿಣಾಮ ಬೀಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
1973 ರಲ್ಲಿ ಏನಾಗಿತ್ತು ಗೊತ್ತಾ?
ತಜ್ಞರ ಪ್ರಕಾರ, ಇಂದಿನ ಪರಿಸ್ಥಿತಿ 1973ರ ಜಾಗತಿಕ ತೈಲ ಬಿಕ್ಕಟ್ಟನ್ನು ನೆನಪಿಸುವಂತಿದ್ದು, ಆಗಿನಂತೆಯೇ ತೈಲ ಪೂರೈಕೆ ಸಂಪೂರ್ಣ ಸ್ಥಗಿತಗೊಂಡರೆ ಜಗತ್ತಿನ ಆರ್ಥಿಕ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀಳಬಹುದು.
ಇದನ್ನೂ ಓದಿ: ಒಮಾನ್ ಗಲ್ಫ್ನತ್ತ ಭಾರತದ 6ಕ್ಕೂ ಹೆಚ್ಚು ಯುದ್ಧನೌಕೆ ರವಾನೆ: ಕೇಂದ್ರದ ದಿಢೀರ್ ನಿರ್ಧಾರಕ್ಕೆ ಇಲ್ಲಿದೆ ಕಾರಣ
ಒಟ್ಟಿನಲ್ಲಿ, ಗಲ್ಫ್ ಪ್ರದೇಶದ ಯುದ್ಧ ತೀವ್ರತೆ ಕಡಿಮೆಯಾಗದಿದ್ದರೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಮತ್ತೊಂದು ದೊಡ್ಡ ಇಂಧನ ಸಂಕಷ್ಟವನ್ನು ಎದುರಿಸಬೇಕಾಗುವ ಸಾಧ್ಯತೆ ತಲೆದೋರಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.