
ಮೈಸೂರು, ಮಾರ್ಚ್ 7: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪ್ರತಿಕೂಲ ಪರಿಣಾಮ ಭಾರತದ ಮೇಲೆ ಬೀರಲು ಪ್ರಾರಂಭವಾಗಿದೆ. ಎಲ್ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ವಿಶೇಷವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ 115 ರೂಪಾಯಿ ಹೆಚ್ಚಳವಾಗಿದೆ. ಈ ಬೆಲೆ ಏರಿಕೆ ಮತ್ತು ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯ ಮೈಸೂರಿನ ಹೋಟೆಲ್ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ದಿಢೀರ್ ಹೆಚ್ಚಳವಾಗಿದ್ದು, ಜೊತೆಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಸಹ ಆಗುತ್ತಿಲ್ಲ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ಹೇಳಿದ ತಕ್ಷಣ ಸಿಗುತ್ತಿದ್ದ ಸಿಲಿಂಡರ್‌ಗಳು ಈಗ ವಿಳಂಬವಾಗಿ ತಲುಪುತ್ತಿವೆ. ಯುದ್ಧದ ಪರಿಸ್ಥಿತಿ ಮತ್ತು ಪೂರೈಕೆ ಕೊರತೆಯನ್ನೇ ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆ. ಮೈಸೂರಿನಂತಹ ನಗರದಲ್ಲಿ ಹೋಟೆಲ್ ಉದ್ಯಮಕ್ಕೆ ದಿನಕ್ಕೆ 20-25 ಸಾವಿರ ಸಿಲಿಂಡರ್‌ಗಳು ಬೇಕಾಗುತ್ತವೆ. ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಾಸದಿಂದ ಉದ್ಯಮದ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಜನರ ಬದುಕು ಅನಿಶ್ಚಿತತೆಗೆ ಒಳಗಾಗಿದೆ.
ಮತ್ತೊಂದೆಡೆ, ಪದೇಪದೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ಗಳಲ್ಲಿ ತಿಂಡಿಗಳ ಬೆಲೆ ಏರಿಕೆಯಾಗುವ ಆತಂಕವೂ ಎದುರಾಗಿದೆ. ಒಂದು ವೇಳೆ ಹೀಗಾದರೆ ಗ್ರಾಹಕರ ಜೇಬಿಗೂ ಹೊರೆಯಾಗಲಿದೆ.