ಎಲ್ಲಿಗೆ ಬಂತು ಮೈಸೂರು ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಾಮಗಾರಿ? ಉದ್ಘಾಟನೆ ಯಾವಾಗ? – Kannada News | Mysuru Kidwai Peripheral Cancer Center Nears Completion by Year End

ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಟ್ಟಡ

ಮೈಸೂರು, ಮಾರ್ಚ್​​ 02: ಇದುವರೆಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಬೇಕಾಗಿದ್ದ ಮೈಸೂರು ಭಾಗದ ರೋಗಿಗಳಿಗೆ ಶೀಘ್ರವೇ ದೂರ ಪ್ರಯಾಣದ ತಲೆಬಿಸಿ ತಪ್ಪಲಿದ್ದು, ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ರೇಡಿಯೇಷನ್ ಆಂಕಾಲಜಿ, ಮೆಡಿಕಲ್ ಆಂಕಾಲಜಿ ಮತ್ತು ಸರ್ಜಿಕಲ್ ಆಂಕಾಲಜಿ ವಿಭಾಗಗಳು ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಸೇವೆಯ ವಿಸ್ತರಣೆ ನಡೆಯಲಿದೆ.

ಇಂಡಿಯನ್​​ ಕೌನ್ಸಿಲ್​​ ಆಫ್​​ ಮೆಡಿಕಲ್​​ ರಿಸರ್ಚ್​​ ಹಾಗೂ ನ್ಯಾಷನಲ್​​ ಸೆಂಟರ್​​​ ಫಾರ್​​ ಡಿಸೀಸಸ್​​ ಇನ್​​ಪಾರ್​​ಮ್ಯಾಟಿಕ್ಸ್​​ ಆ್ಯಂಡ್​ ರಿಸರ್ಚ್​​ ವರದಿ ಪ್ರಕಾರ, ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 89,000 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಸುಮಾರು 2.5 ಲಕ್ಷ ಜನರು ಈ ಕಾಯಿಲೆಯೊಂದಿಗೆ ಬದುಕುತ್ತಿದ್ದಾರೆ. ಕ್ಯಾನ್ಸರ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ, ಸರ್ಕಾರ ನಡೆಸುತ್ತಿರುವ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದುಬಾರಿಯಾಗಿರುವುದರಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಇದೇ ಆಸ್ಪತ್ರೆಯ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದ ಚಿಕಿತ್ಸೆಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಒತ್ತಡ ಕಡಿಮೆ ಮಾಡಲು ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್‌ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ.

ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್​​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2023ರಲ್ಲಿ ಚಾಲನೆ ನೀಡಿದ್ದರು. ಪ್ರಾರಂಭದಲ್ಲಿ 100 ಹಾಸಿಗೆಗಳ ಸಾಮರ್ಥ್ಯದಿಂದ ಆಸ್ಪತ್ರೆ ಆರಂಭವಾಗಲಿದ್ದು, ಮುಂದಿನ ವರ್ಷಗಳಲ್ಲಿ ಸಾಮರ್ಥ್ಯ ಹೆಚ್ಚಳಕ್ಕೆ ಚಿಂತನೆ ಇದೆ. ಕೆಆರ್‌ಎಸ್ ರಸ್ತೆ ಸಮೀಪದ ಪಿಕೆಟಿಬಿ ಸ್ಯಾನಟೋರಿಯಂ ಹಿಂಭಾಗದ ಐದು ಏಕರೆ ಜಾಗದಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತಿದೆ. ಸುಮಾರು 123 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಈಗಾಗಲೇ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಆಸ್ಪತ್ರೆ ನಿರ್ಮಾನದಿಂದ ಮೈಸೂರು ಮಾತ್ರವಲ್ಲದೆ ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ.

2025ರ ಅಂಕಿಅಂಶಗಳ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 5,035 ಪುರುಷರು ಹಾಗೂ 6,839 ಮಹಿಳೆಯರು ಕ್ಯಾನ್ಸರ್‌ನೊಂದಿಗೆ ಬದುಕುತ್ತಿದ್ದಾರೆ. ಚಾಮರಾಜನಗರದಲ್ಲಿ 1,533 ಪುರುಷರು ಹಾಗೂ 2,108 ಮಹಿಳೆಯರು, ಹಾಸನದಲ್ಲಿ 2,589 ಪುರುಷರು ಹಾಗೂ 3,512 ಮಹಿಳೆಯರು, ಮಂಡ್ಯ ಜಿಲ್ಲೆಯಲ್ಲಿ 2,630 ಪುರುಷರು ಹಾಗೂ 3,528 ಮಹಿಳೆಯರು ಕ್ಯಾನ್ಸರ್ ಪೀಡಿತರಾಗಿದ್ದಾರೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *