ನವದೆಹಲಿ, ಜುಲೈ 7: ದೇಶಾದ್ಯಂತ ಮುಂಗಾರು ಮಳೆಯ (Monsoon 2026) ಆರ್ಭಟ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ, ಭೂಕುಸಿತ ಕೂಡ ಉಂಟಾಗಿದೆ. ‘ಎಲ್ ನಿನೊ’ ಹವಾಮಾನ ವೈಪರೀತ್ಯದಿಂದ ದೇಶದ ಆರ್ಥಿಕತೆಯ ಮೇಲಾಗುವ ಸಂಭಾವ್ಯ ಪರಿಣಾಮಗಳನ್ನು ತಡೆಗಟ್ಟಲು ಪ್ರಧಾನ ಮಂತ್ರಿ ಕಚೇರಿಯು (PMO) ಇಂದು ‘ಸೇವಾ ತೀರ್ಥ’ದಲ್ಲಿ ವಿವಿಧ ಸಚಿವಾಲಯಗಳ ಜಂಟಿ ಪರಿಶೀಲನಾ ಸಭೆಯನ್ನು ನಡೆಸಿತು. ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಕೃಷಿ, ವಿದ್ಯುತ್, ಜಲಸಂಪನ್ಮೂಲ, ಆರೋಗ್ಯ ಮತ್ತು ಭಾರತೀಯ ಹವಾಮಾನ ಇಲಾಖೆ ಸೇರಿದಂತೆ 15ಕ್ಕೂ ಹೆಚ್ಚು ಪ್ರಮುಖ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಹವಾಮಾನ ಇಲಾಖೆಯ ಮಹಾನಿರ್ದೇಶಕರು ಮುಂಗಾರು ಮಳೆಯ ಸದ್ಯದ ಸ್ಥಿತಿಗತಿಯ ಬಗ್ಗೆ ವಿವರವಾದ ವರದಿ ನೀಡಿದರು. ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದ ಪ್ರಮುಖ ಕೃಷಿ ವಲಯಗಳಲ್ಲಿ ಮುಂಗಾರು ಪ್ರವೇಶ ಸುಮಾರು 10 ದಿನಗಳಷ್ಟು ತಡವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸುರಿದ ಉತ್ತಮ ಮಳೆಯು ಪರಿಸ್ಥಿತಿಯನ್ನು ಸುಧಾರಿಸಿದೆ.
ಮಳೆ ಕೊರತೆ ಇಳಿಕೆ:
ಜುಲೈ 7, 2026ರವರೆಗೆ ದೇಶಾದ್ಯಂತ ವ್ಯಾಪಕ ಮಳೆಯಾಗಿದ್ದರಿಂದ, ಒಟ್ಟಾರೆ ಮುಂಗಾರು ಮಳೆಯ ಕೊರತೆಯು ಕೇವಲ ಶೇ. -12ಕ್ಕೆ ಇಳಿಕೆಯಾಗಿದೆ. ಜುಲೈ ಮೊದಲ ವಾರದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಇಡೀ ಮುಂಗಾರು ಸೀಸನ್‌ನ ಒಟ್ಟು ಮಳೆಯ ಶೇ. 30ಕ್ಕಿಂತ ಹೆಚ್ಚು ಭಾಗ ಜುಲೈ ತಿಂಗಳಲ್ಲೇ ಬರುವುದರಿಂದ ಈ ಸುಧಾರಣೆ ಅತ್ಯಂತ ಪ್ರಮುಖವಾಗಿದೆ.
ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?
ಎಲ್ ನಿನೊ ಮುನ್ಸೂಚನೆ:
ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಎಲ್ ನಿನೊ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಆದರೆ, ಹಿಂದಿನ ವರ್ಷಗಳನ್ನು ಗಮನಿಸಿದರೆ ಎಲ್ ನಿನೊ ವರ್ಷವಾದ ಮಾತ್ರಕ್ಕೆ ದೇಶದಲ್ಲಿ ಮಳೆ ಕೊರತೆಯಾಗುತ್ತದೆ ಎಂದರ್ಥವಲ್ಲ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಖಾರಿಫ್ ಬೆಳೆ ರಕ್ಷಣೆಗೆ ತುರ್ತು ಯೋಜನೆ ಸಿದ್ಧ:
ಹವಾಮಾನ ವೈಪರೀತ್ಯದಿಂದ ಗ್ರಾಮೀಣ ಆರ್ಥಿಕತೆಗೆ ಧಕ್ಕೆಯಾಗದಂತೆ ತಡೆಯಲು ಕೃಷಿ ಸಚಿವಾಲಯದ ಕಾರ್ಯದರ್ಶಿಯವರು ತಂತ್ರಜ್ಞಾನ ಆಧಾರಿತ ತುರ್ತು ಯೋಜನೆಯನ್ನು ವಿವರಿಸಿದರು. ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳುವ ಕೃಷಿ ತಳಿಗಳು ಮತ್ತು ಸುಧಾರಿತ ಬೇಸಾಯ ಪದ್ಧತಿಗಳ ಮೂಲಕ ಭಾರತವು ಈಗಾಗಲೇ ತನ್ನ ಆಹಾರ ಧಾನ್ಯ ಉತ್ಪಾದನೆಯನ್ನು ಸ್ಥಿರವಾಗಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: El Nino: ನಿರೀಕ್ಷಿತ ಎಲ್ ನಿನೊ ಬರಲಿದೆ ಎಂದು ಘೋಷಿಸಿದ ಅಮೆರಿಕ, ಹವಾಮಾನ ಬದಲಾವಣೆಯ ಬಗ್ಗೆ ಹೆಚ್ಚಿದ ಆತಂಕ
ಈ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸರ್ಕಾರವು ಬಹುವಿಧದ ರಕ್ಷಣಾ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಅವುಗಳೆಂದರೆ,
ಜಿಲ್ಲಾ ಮಟ್ಟದ ಸಿದ್ಧತೆ: ಮಳೆಯ ಅಭಾವ ಎದುರಿಸಬಹುದಾದ 262 ಸೂಕ್ಷ್ಮ ಜಿಲ್ಲೆಗಳಲ್ಲಿ ‘ಜಿಲ್ಲಾ ಕೃಷಿ ತುರ್ತು ಯೋಜನೆ’ಗಳನ್ನು ನವೀಕರಿಸಿ ಜಾರಿಗೆ ತರಲಾಗಿದೆ.
ರೈತರಿಗೆ ಮಾರ್ಗಸೂಚಿ (SOP): ಭಾರತೀಯ ಕೃಷಿ ಸಂಶೋಧನಾ ಮಂಡಳಿಯು (ICAR) “ಭಾರತೀಯ ಕೃಷಿಯಲ್ಲಿ ಎಲ್ ನಿನೊ ಅಪಾಯಗಳ ನಿರ್ವಹಣೆ” ಎಂಬ ವಿಶೇಷ ಮಾರ್ಗಸೂಚಿಯನ್ನು ಜಿಲ್ಲಾ ಮಟ್ಟದ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಬಿಡುಗಡೆ ಮಾಡಿದೆ.
ನಿರಂತರ ನಿಗಾ: ‘ಕ್ರಾಪ್ ವೆದರ್ ವಾಚ್ ಗ್ರೂಪ್’ ರಾಜ್ಯ ಸರ್ಕಾರಗಳೊಂದಿಗೆ ಪ್ರತಿ ವಾರ ಜಂಟಿ ಸಭೆ ನಡೆಸಿ ಸ್ಥಳೀಯ ಮಳೆ, ಬಿತ್ತನೆ ಪ್ರಮಾಣ, ಕೃಷಿ ಪರಿಕರಗಳ ಲಭ್ಯತೆ, ಜಲಾಶಯಗಳ ನೀರಿನ ಮಟ್ಟ ಮತ್ತು ಕೀಟಬಾಧೆಗಳ ಬಗ್ಗೆ ನಿರಂತರ ನಿಗಾ ವಹಿಸುತ್ತಿದೆ.
ಆರ್ಥಿಕ ರಕ್ಷಣೆ: ಹೆಚ್ಚು ಅಪಾಯವಿರುವ ಪ್ರದೇಶಗಳಲ್ಲಿ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ (ಬೆಳೆ ವಿಮೆ) ಮತ್ತು ‘ಕಿಸಾನ್ ಕ್ರೆಡಿಟ್ ಕಾರ್ಡ್’ ಅಡಿಯಲ್ಲಿ ರೈತರ ನೋಂದಣಿಯನ್ನು ವೇಗಗೊಳಿಸಲು ಬೃಹತ್ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ.
ಮುಂಗಾರು ಏರುಪೇರಾದರೆ ಅದು ಕೇವಲ ಕೃಷಿಯ ಮೇಲಷ್ಟೇ ಅಲ್ಲದೆ ಇತರ ವಲಯಗಳ ಮೇಲೂ ಪ್ರಭಾವ ಬೀರುವುದರಿಂದ, ರಾಜ್ಯ ಸರ್ಕಾರಗಳೊಂದಿಗೆ ಸೂಕ್ಷ್ಮ ಮಟ್ಟದ ಸಮನ್ವಯ ಸಾಧಿಸಿ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಡಾ. ಪಿ.ಕೆ. ಮಿಶ್ರಾ ಅವರು ಸಚಿವಾಲಯಗಳಿಗೆ ಸೂಚಿಸಿದ್ದಾರೆ. ಸದ್ಯಕ್ಕೆ ಅಂತರ್ಜಲ ಮಟ್ಟ ಮತ್ತು ಪ್ರಮುಖ ಜಲಾಶಯಗಳ ನೀರಿನ ಸಾಮರ್ಥ್ಯ ಸ್ಥಿರವಾಗಿದ್ದರೂ, ನೀರು ಕಡಿಮೆ ಇರುವ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಜಲಶಕ್ತಿ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಗಳಿಗೆ ಸೂಚಿಸಲಾಗಿದೆ. ಜಲಾಶಯಗಳಲ್ಲಿರುವ ನೀರನ್ನು ಅತ್ಯಂತ ಮಿತವಾಗಿ ಮತ್ತು ಸೂಕ್ತವಾಗಿ ಬಳಸಿಕೊಳ್ಳಲು PMO ಒತ್ತು ನೀಡಿದೆ.
ಮಾರುಕಟ್ಟೆ ಮತ್ತು ಅಗತ್ಯ ವಸ್ತುಗಳ ಪೂರೈಕೆ:
ದೇಶದಲ್ಲಿ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳ ಬಫರ್ ಸ್ಟಾಕ್ ಸಮೃದ್ಧವಾಗಿ ಇರುವುದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಗಳು ಸ್ಥಿರವಾಗಿವೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಖಚಿತಪಡಿಸಿದೆ. ಇದರೊಂದಿಗೆ, ಮುಂಬರುವ ರಬಿ (ಚಳಿಗಾಲದ) ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರ ಸಂಗ್ರಹವೂ ಲಭ್ಯವಿದೆ ಎಂದು ರಸಗೊಬ್ಬರ ಇಲಾಖೆ ವರದಿ ಮಾಡಿದೆ.
ಸಾರ್ವಜನಿಕ ಆರೋಗ್ಯ ಜಾಗೃತಿ:
ಹವಾಮಾನ ವೈಪರೀತ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗರಿಷ್ಠ ತೇವಾಂಶ, ಬಿಸಿಗಾಳಿ ಮತ್ತು ಈ ಅವಧಿಯಲ್ಲಿ ಹರಡುವ ಡೆಂಗ್ಯೂ ತಡೆಗಟ್ಟಲು ವೈದ್ಯಕೀಯ ತಂಡಗಳು ಸನ್ನದ್ಧವಾಗಿದ್ದು, ತಳಮಟ್ಟದ ಸಮುದಾಯಗಳಿಗೆ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
