ಇತ್ತೀಚಿನ ದಿನಗಳಲ್ಲಿ ಜನ ಬಿಸಿಲಾಗಲಿ, ಮಳೆಯಾಗಲಿ ಮನೆ, ಆಫೀಸ್ ಹಾಗೆಯೇ ಸಂಚರಿಸುವ ವಾಹನಗಳಲ್ಲಿಯೂ ಏರ್ ಕಂಡೀಷನರ್ (AC) ಬಳಕೆ ಮಾಡಲು ಆರಂಭ ಮಾಡಿದ್ದಾರೆ. ಹಾಗಾಗಿ ಇದೊಂದು ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ. ಆದರೆ, ಎಸಿಯಲ್ಲಿ ಹೆಚ್ಚು ಸಮಯ ಇರುವವರಲ್ಲಿ ಎಲುಬುಗಳು ಬೇಗ ದುರ್ಬಲವಾಗುತ್ತವೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಎಸಿಯ ತಂಪು ಗಾಳಿ ನೇರವಾಗಿ ಎಲುಬುಗಳಿಗೆ ಹಾನಿ ಮಾಡುವುದಿಲ್ಲ. ಆದರೆ ಕೆಲವು ಪರೋಕ್ಷ ಪರಿಣಾಮಗಳು ಎಲುಬಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಎಸಿ ಯಾವ ರೀತಿ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ, ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಎಲುಬುಗಳ ಮೇಲೆ ಎಸಿಯ ಪರಿಣಾಮ
ಸಾಮಾನ್ಯವಾಗಿ ಎಲುಬುಗಳ ಬಲವು ಮುಖ್ಯವಾಗಿ ಕ್ಯಾಲ್ಸಿಯಂ, ವಿಟಮಿನ್ ಡಿ, ಸಮತೋಲಿತ ಆಹಾರ ಹಾಗೂ ನಿಯಮಿತ ವ್ಯಾಯಾಮದ ಮೇಲೆ ಅವಲಂಬಿತವಾಗಿರುತ್ತದೆ. ದಿನದ ಬಹುಪಾಲು ಸಮಯವನ್ನು ಎಸಿ ಕೊಠಡಿಗಳಲ್ಲೇ ಕಳೆಯುವುದರಿಂದ ಸೂರ್ಯನ ಬೆಳಕಿನ ಸಂಪರ್ಕ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಬಹುದು. ದೀರ್ಘಕಾಲದ ವಿಟಮಿನ್ ಡಿ ಕೊರತೆ ಎಲುಬುಗಳನ್ನು ದುರ್ಬಲಗೊಳಿಸಿ ಆಸ್ಟಿಯೋಪೊರೋಸಿಸ್‌ನಂತಹ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಕೀಲು ನೋವು ಹೆಚ್ಚಾಗುತ್ತದೆಯೇ?
ಎಸಿ ಬಳಕೆಯಿಂದ ಆರ್ಥ್ರೈಟಿಸ್ ಉಂಟಾಗುವುದಿಲ್ಲ. ಆದರೆ ಈಗಾಗಲೇ ಕೀಲು ನೋವು ಅಥವಾ ಆಸ್ಟಿಯೋಆರ್ಥ್ರೈಟಿಸ್ ಇರುವವರಿಗೆ ತಂಪಾದ ವಾತಾವರಣದಿಂದ ನೋವು, ಬಿಗಿತದ ಅನುಭವವಾಗಬಹುದು.
ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
- ಪ್ರತಿದಿನ ಕನಿಷ್ಠ 10– 15 ನಿಮಿಷ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಬೇಕು.
- ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧ ಆಹಾರ ಸೇವಿಸಿ.
- ಹಾಲು, ಮೊಸರು, ಚೀಸ್ ಮುಂತಾದ ಹಾಲು ಉತ್ಪನ್ನಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
- ಪ್ರತಿದಿನ ನಡೆಯುವುದು ಅಥವಾ ಲಘು ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
- ಎಸಿ ತಾಪಮಾನವನ್ನು 24°C ಇಡುವುದು ಉತ್ತಮ.
- ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
