ಎಸ್. ಜಾನಕಿ ನಿಧನ: ಶಿವಣ್ಣ, ಜಗ್ಗೇಶ್, ತ್ರಿಶಾ ಸೇರಿ ಹಲವು ಸೆಲೆಬ್ರಿಟಿಗಳ ಸಂತಾಪ – Kannada News | Singer S Janaki Passes Away Sandalwood Celebrities Shivrajkumar Jaggesh Trisha mourn

ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಎಸ್. ಜಾನಕಿ (S Janaki) ಅವರು ನಿಧನರಾಗಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಅನೇಕ ಸೆಲೆಬ್ರಿಟಿಗಳು ಜಾನಕಿ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ನಟ ಶಿವರಾಜ್​ಕುಮಾರ್ (Shivrajkumar) ಕೂಡ ಸಂತಾಪ ಸೂಚಿಸಿದ್ದಾರೆ. ಅದೇ ರೀತಿ ಜಗ್ಗೇಶ್, ವಿನೋದ್ ರಾಜ್, ತ್ರಿಶಾ ಕೃಷ್ಣನ್, ಸುಮಲತಾ ಅಂಬರೀಷ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಎಸ್. ಜಾನಕಿ ಅಗಲಿಕೆಗೆ ಶಿವರಾಜ್​ಕುಮಾರ್ ಸಂತಾಪ:

‘ಜಾನಕಮ್ಮ ಅವರ ನಿಧನದ ವಿಚಾರ ತಿಳಿದು ದುಃಖ ಆಗಿದೆ. ಅಪ್ಪಾಜಿ ಜೊತೆಯಲ್ಲೂ ಸಾಕಷ್ಟು ಹಾಡುಗಳನ್ನು ಹಾಡಿದ್ದರು. ಜಾನಕಿ ಅಮ್ಮನವರಿಗೆ ನಮ್ಮನ್ನು ಕಂಡರೆ ತುಂಬಾ ಪ್ರೀತಿ. ಗಾಯಕಿ ಆಗಿ ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಜಾನಕಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಅಭಿಮಾನಿಗಳು, ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ’ ಎಂದು ಜಾನಕಿ ನಿಧನಕ್ಕೆ ಶಿವರಾಜ್​ಕುಮಾರ್ ಸಂತಾಪ ಸೂಚಿಸಿದ್ದಾರೆ.

ಭಾವುಕರಾಗಿ ಶ್ರದ್ಧಾಂಜಲಿ ಸಲ್ಲಿಸಿದ ಜಗ್ಗೇಶ್:

ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ‘ಯಾಕೋ ಬೆಳಿಗ್ಗೆಯಿಂದ ಈ ಹಾಡು (ದೇವರ ಆಟ ಬಲ್ಲವರಾರು..) ಬಹಳ ಕಾಡಿತು. ಇಂದು ಬೆಳಿಗ್ಗೆಯಿಂದ ಈ ತಾಯಿ ಹಾಡು ಕೇಳುತ್ತಿರುವೆ. ಕೇಳುವುದನ್ನು ಮನಸ್ಸು ನಿಲ್ಲಿಸುತ್ತಿಲ್ಲ. ಅಬ್ಬಾ ಎಂಥ ಸಿರಿಕಂಠ. ಇಂದು ಅವರು ನಮ್ಮನ್ನು ಅಗಲಿದ್ದಾರೆ. ಹೋಗಿ ಬನ್ನಿ ಸುಮಧುರ ಕಲಾಕಂಠವೆ’ ಎಂದು ಅವರು ಜಗ್ಗೇಶ್ ಬರೆದುಕೊಂಡಿದ್ದಾರೆ.

ಜಾನಕಿ ನಿಧನಕ್ಕೆ ತ್ರಿಶಾ ಕೃಷ್ಣನ್ ಕಂಬನಿ:

ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಜಾನಕಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ‘ನನ್ನ ಅತ್ಯಂತ ವಿಶೇಷವಾದ ಚಿತ್ರವೊಂದರಲ್ಲಿ ನಿಮ್ಮ ಹೆಸರಿನ ಪಾತ್ರವನ್ನು ಮಾಡಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಗೌರವಗಳಲ್ಲಿ ಒಂದಾಗಿ ಎಂದೆಂದಿಗೂ ಉಳಿಯುತ್ತದೆ. ನಿಮ್ಮಿಂದ ಪ್ರೀತಿ ಪಡೆದಿರುವುದು ನಾನು ಜೀವನದಲ್ಲಿ ಎಂದೆಂದಿಗೂ ಸಂಭ್ರಮಿಸುವ ಸಂಗತಿಯಾಗಿದೆ. ನಿಮ್ಮ ಅಪ್ಪುಗೆಗೆ, ನಿಮ್ಮ ದಯೆಗೆ, ನಿಮ್ಮ ನಗುವಿಗೆ ಧನ್ಯವಾದಗಳು. ಕಲಾವಿದರು ಯಾವಾಗಲೂ ಅತ್ಯಂತ ವಿನಮ್ರವಾಗಿರಬೇಕು ಎಂಬುದನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ಎಂದೆಂದಿಗೂ ಜೀವಂತವಾಗಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.

‘ಸಂಗೀತ ಲೋಕದ ಧ್ರುವತಾರೆ, ಪದ್ಮಭೂಷಣ್ ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಮಧುರ ಕಂಠ ಮತ್ತು ಅಮರ ಗೀತೆಗಳು ತಲೆಮಾರುಗಳ ಹೃದಯಗಳನ್ನು ಸದಾ ಸ್ಪರ್ಶಿಸುತ್ತಲೇ ಇರುತ್ತವೆ. ನಿಮ್ಮ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ಎಂದಿಗೂ ತುಂಬಲಾರದ ನಷ್ಟ. ಆದರೆ ನಿಮ್ಮ ಸ್ವರ ಮತ್ತು ನಿಮ್ಮ ಹಾಡುಗಳು ನಮ್ಮ ನೆನಪುಗಳಲ್ಲಿ ಚಿರಕಾಲ ಜೀವಂತವಾಗಿರುತ್ತವೆ. ಓಂ ಶಾಂತಿ’ ಎಂದು ಸುಮಲತಾ ಅಂಬರೀಷ್ ಅವರು ಸೋಶಿಯಲ್ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ: ಎಸ್ ಜಾನಕಿ ನಿಧನ: 20 ಭಾಷೆ, 48 ಸಾವಿರ ಹಾಡು, ಗಾಯಕಿ ನಡೆದುಬಂದ ಹಾದಿ

ನಟ ವಿನೋದ್ ರಾಜ್ ಮಾತನಾಡಿ, ‘ಜಾನಕಿ ಅವರಂತಹ ಗಾಯಕಿ ಮತ್ತೆ ಹುಟ್ಟಲ್ಲ. ಉತ್ತುಂಗದ ಸ್ಥಾನದಲ್ಲಿ ಇದ್ದಾಗಲೂ ಕೂಡ ಅವರು ವಿನಮ್ರವಾಗಿ ಇರುತ್ತಿದ್ದರು. ಇಂದಿನ ತನಕ ಅವರು ಶ್ರೇಷ್ಠ ಗಾಯಕಿಯಾಗಿ ಉಳಿದುಕೊಂಡರು. ಒಳ್ಳೆಯ ವ್ಯಕ್ತಿತ್ವ ಅವರದ್ದು. ನಮ್ಮ ತಾಯಿಯನ್ನು ಕಂಡರೆ ಅವರಿಗೆ ತುಂಬಾ ಇಷ್ಟ. ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಇಂದು ಅವರು ಇಲ್ಲ ಎಂಬುದು ನನಗೆ ತುಂಬಾ ನೋವು ಕೊಡುತ್ತದೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *