ಎಸ್ ಜಾನಕಿ ನಿಧನ: 20 ಭಾಷೆ, 48 ಸಾವಿರ ಹಾಡು, ಗಾಯಕಿ ನಡೆದುಬಂದ ಹಾದಿ – Kannada News | Singer S Janaki Obituary: 20 Language and 48K Songs The End of an Era

ಭಾರತೀಯ ಚಿತ್ರರಂಗದ ಅದ್ಭುತ ಧ್ವನಿ, ಸಹಸ್ರಾರು ಎವರ್​​ಗ್ರೀನ್ ಗೀತೆಗಳ ಗಾಯಕಿ ಎಸ್. ಜಾನಕಿ ಅವರು ಇಂದು (ಜುಲೈ 11) ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರ ನಿಧನದಿಂದಾಗಿ ಸಂಗೀತ ಲೋಕದ ಸುವರ್ಣ ಯುಗವೊಂದು ಮುಕ್ತಾಯಗೊಂಡಂತಾಗಿದೆ. ಅವರು ನಡೆದುಬಂದ ಹಾದಿ ಬಗ್ಗೆ ಇಲ್ಲಿದೆ ಮಾಹಿತಿ.

ಗುಂಟೂರಿನಿಂದ ಚೆನ್ನೈವರೆಗೆ: ಬಾಲ್ಯ ಮತ್ತು ಸಂಗೀತ ಪಯಣ

ಜಾನಕಿ ಅವರು 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ಸಂಗೀತದ ಕಡೆಗೆ ಅಪಾರ ಆಕರ್ಷಣೆ ಹೊಂದಿದ್ದ ಇವರು, ಶಾಸ್ತ್ರೀಯ ಸಂಗೀತಗಾರರಾದ ಪೈಡಿಸ್ವಾಮಿ ಅವರಿಂದ ಸಂಗೀತದ ಆರಂಭಿಕ ಪಾಠಗಳನ್ನು ಕಲಿತರು. ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸಿನೊಂದಿಗೆ ಜಾನಕಿ ಅವರು ತಮ್ಮ 20ನೇ ವಯಸ್ಸಿನಲ್ಲೇ ಅಂದಿನ ಮದ್ರಾಸ್ (ಈಗಿನ ಚೆನ್ನೈ) ನಗರಕ್ಕೆ ಹೆಜ್ಜೆ ಇಟ್ಟರು. ಅಲ್ಲಿಂದ ಆರಂಭವಾದ ಅವರ ಗಾಯನ ಪಯಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆಯಿತು.

ಇದನ್ನೂ ಓದಿ:  ಹಾಡು ನಿಲ್ಲಿಸಿದ ‘ಗಾನಕೋಗಿಲೆ’; ಖ್ಯಾತ ಗಾಯಕಿ ಎಸ್. ಜಾನಕಿ ನಿಧನ

20ಕ್ಕೂ ಹೆಚ್ಚು ಭಾಷೆಗಳು, 48 ಸಾವಿರ ಗೀತೆಗಳು

ಎಸ್. ಜಾನಕಿ ಅವರ ಕಂಠಸಿರಿಗೆ ಯಾವುದೇ ಭಾಷೆಯ ಗಡಿ ಇರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಶಾ, ತುಳು, ಉರ್ದು, ಪಂಜಾಬಿ, ಬಂಗಾಳಿ ಹಾಗೂ ಕೊಂಕಣಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗುವ ಮೂಲಕ ಇಡೀ ದೇಶದ ಮನೆಮನ ಗೆದ್ದಿದ್ದರು. ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅವರ ಸ್ಪಷ್ಟ ಉಚ್ಚಾರಣೆ ಮತ್ತು ಧ್ವನಿ ಬದಲಾವಣೆಯ ಚಾತುರ್ಯ ಕನ್ನಡಿಗರು ಅವರನ್ನು ತಮ್ಮದೇ ರಾಜ್ಯದ ಗಾಯಕಿ ಎನ್ನುವಂತೆ ಅಪ್ಪಿಕೊಳ್ಳುವಂತೆ ಮಾಡಿತ್ತು.

ಪ್ರಶಸ್ತಿ ಪುರಸ್ಕಾರಗಳ ಮಹಾಪೂರ:

  1. ಎಸ್. ಜಾನಕಿ ಅವರ ಅಪ್ರತಿಮ ಸಾಧನೆಗೆ ಸಾಲು ಸಾಲು ಗೌರವಗಳು ಹುಡುಕಿಕೊಂಡು ಬಂದಿದ್ದವು:
  2. ರಾಷ್ಟ್ರೀಯ ಪ್ರಶಸ್ತಿಗಳು: ಗಾಯನಕ್ಕಾಗಿ 4 ಬಾರಿ ಅತ್ಯುನ್ನತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು.
  3. ರಾಜ್ಯ ಪ್ರಶಸ್ತಿಗಳು: ದೇಶದ ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 33 ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
  4. ಪದ್ಮಭೂಷಣ: 2013ರಲ್ಲಿ ಅವರಿಗೆ ದೇಶದ ಪ್ರತಿಷ್ಠಿತ ‘ಪದ್ಮಭೂಷಣ’ ಪ್ರಶಸ್ತಿ ಒಲಿದುಬಂದಿತ್ತು.
  5. ರಾಜ್ಯದ ಗೌರವ: ಕರ್ನಾಟಕ ಸರ್ಕಾರದಿಂದ ಗೌರವಾನ್ವಿತ ‘ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ ಪ್ರಶಸ್ತಿ’ ಮುಡಿಗೇರಿಸಿಕೊಂಡಿದ್ದರು.
  6. ಗೌರವ ಡಾಕ್ಟರೇಟ್: ಮೈಸೂರು ವಿಶ್ವವಿದ್ಯಾಲಯವು ಅವರ ಸಂಗೀತ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿತ್ತು.
  7. ತಮ್ಮ ಮಧುರ ಧ್ವನಿಯ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಜಾನಕಿ ಅಮ್ಮ ಇನ್ನು ನೆನಪು ಮಾತ್ರ. ಅವರ ಸಾವು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *