2026 ರ ಮಹಿಳಾ ಟಿ20 ಏಷ್ಯಾಕಪ್ (2026 Women’s Asia Cup) ಇದೇ ಆಗಸ್ಟ್ 28 ರಿಂದ ಆರಂಭವಾಗಲಿದೆ. ಈ ಕ್ರೀಡಾಕೂಟಕ್ಕೆ ಭಾರತ ಮಹಿಳಾ ತಂಡವನ್ನು ಕೆಲವೇ ದಿನಗಳ ಹಿಂದೆ ಬಿಸಿಸಿಐ ಪ್ರಕಟಿಸಿತ್ತು. ಇದೀಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮಹಿಳಾ ತಂಡವೂ ಪ್ರಕಟವಾಗಿದೆ. ಏಷ್ಯಾಕಪ್ಗೆ ಮಾತ್ರವಲ್ಲದೆ ಅದಾದ ಬಳಿಕ ಜಪಾನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಕ್ರೀಡಾಕೂಟಕ್ಕೂ ಪಾಕ್ ಮಹಿಳಾ ತಂಡ ಪ್ರಕಟವಾಗಿದೆ. ಯುವ ಆಲ್‌ರೌಂಡರ್ ಫಾತಿಮಾ ಸನಾ ಈ ಎರಡೂ ಪಂದ್ಯಾವಳಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಪಾಕ್ ಮಹಿಳಾ ತಂಡ ಹೀಗಿದೆ
ಹಿರಿಯ ಬ್ಯಾಟರ್ ಆಲಿಯಾ ರಿಯಾಜ್ ಅವರನ್ನು ಏಷ್ಯನ್ ಗೇಮ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಆಯ್ಕೆದಾರರು ಸದಾಫ್ ಶಮಾಸ್ ಮತ್ತು ಸಿದ್ರಾ ಅಮೀನ್ ಅವರನ್ನು ಕೈಬಿಟ್ಟಿದ್ದಾರೆ. ಪಾಕಿಸ್ತಾನವು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಕ್ವಾರ್ಟರ್ ಫೈನಲ್‌ಗೆ ನೇರವಾಗಿ ಪ್ರವೇಶಿಸಲಿದೆ. ಸೆಪ್ಟೆಂಬರ್ 17 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನವು ಥೈಲ್ಯಾಂಡ್ ತಂಡವನ್ನು ಎದುರಿಸಲಿದೆ.
ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಪಾಕಿಸ್ತಾನ ತಂಡದಲ್ಲಿ ಮುನೀಬ್ ಅಲಿ ಸಿದ್ದಿಕಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆಯೇಷಾ ಜಾಫರ್, ಇಮಾನ್ ನಸೀರ್, ಇಮಾನ್ ಫಾತಿಮಾ, ಗುಲ್ ಫಿರೋಜಾ, ಮೊಮಿನಾ ರಿಯಾಸತ್, ನಜಿಹಾ ಅಲ್ವಿ, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ಸೈರಾ ಜಬೀನ್, ಶಾವಲ್ ಜುಲ್ಫಿಕರ್, ತುಬಾ ಹಸನ್, ಉಮ್ಮೆ ಹನಿ, ವಹೀದಾ ಅಖ್ತರ್ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಸ್ಮಿಯಾ ರುಬಾಬ್, ಹುಮ್ನಾ ಬಿಲಾಲ್, ಮಹಮ್ ಅನೀಸ್, ಸದಾಫ್ ಶಮಾಸ್ ಸ್ಟ್ಯಾಂಡ್‌ಬೈ ಆಟಗಾರ್ತಿಯರಾಗಿ ಆಯ್ಕೆಯಾಗಿದ್ದಾರೆ.
ಏಷ್ಯನ್ ಗೇಮ್ಸ್ಗೂ ಅದೇ ತಂಡ
ಏಷ್ಯನ್ ಗೇಮ್ಸ್ನಲ್ಲೂ ಇದೇ ತಂಡ ಕಣಕ್ಕಿಳಿಯಲಿದೆ. ಆದರೆ ಹಿರಿಯ ಬ್ಯಾಟರ್ ಆಲಿಯಾ ರಿಯಾಜ್ ಈ ಕ್ರೀಡಾಕೂಟದಲ್ಲಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ನಟಾಲಿಯಾ ಪರ್ವೇಜ್ ಮತ್ತು ರಮೀನ್ ಶಮಿಮ್‌ರಂತಹ ಆಟಗಾರ್ತಿಯರಿಗೆ ಮೀಸಲು ವಿಭಾಗದಲ್ಲಿ ಅವಕಾಶ ನೀಡಲಾಗಿದೆ. ಹೊಸ ತಂತ್ರಗಳೊಂದಿಗೆ ಮೈದಾನಕ್ಕೆ ಇಳಿಯುತ್ತಿರುವ ಪಾಕಿಸ್ತಾನ ಮಹಿಳಾ ತಂಡವು ಭಾರತೀಯ ಮಹಿಳಾ ತಂಡದೊಂದಿಗೆ ಎಷ್ಟರ ಮಟ್ಟಿಗೆ ಸ್ಪರ್ಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ತಲಾ 4 ತಂಡಗಳ 2 ಗುಂಪು
ಇನ್ನು ಹತ್ತನೇ ಆವೃತ್ತಿಯ ಮಹಿಳಾ ಟಿ20 ಏಷ್ಯಾಕಪ್ ಮೇಲೆ ಹೇಳಿದಂತೆ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಒಟ್ಟು 8 ಏಷ್ಯಾದ ದೇಶಗಳು ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ. ಅವುಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಭಾರತ- ಪಾಕ್ ಮುಖಾಮುಖಿ
ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿವೆ. ಈ ಎರಡು ಸಾಂಪ್ರದಾಯಿಕ ಎದುರಾಳಿಗಳು ಒಂದೇ ಗುಂಪಿನಲ್ಲಿರುವುದರಿಂದ, ಲೀಗ್ ಹಂತದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುವುದು ಖಚಿತ. ಸೆಪ್ಟೆಂಬರ್ 5 ರಂದು ನಡೆಯಲಿರುವ ಗುಂಪು ಹಂತದ ಅಂತಿಮ ಮತ್ತು ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹೈ-ವೋಲ್ಟೇಜ್ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:00 pm, Mon, 17 August 26