ಪ್ರಾತಿನಿಧಿಕ ಚಿತ್ರ (ai generated image)Image Credit source: tv9 kannada
ಬೆಂಗಳೂರು, ಏಪ್ರಿಲ್ 23: ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಅಂದರೆ ಏಪ್ರಿಲ್ 24ರಂದು ಆರ್ಸಿಬಿ ಮತ್ತು ಜಿಟಿ ನಡುವೆ ಐಪಿಎಲ್ ಪಂದ್ಯ (RCB vs GT Match) ನಡೆಯಲಿದೆ. ಫ್ಯಾನ್ಸ್ ಪಂದ್ಯ ನೋಡಲು ಕಾತರರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಸ್ಟೇಡಿಯಂ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಹಲವು ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ವಾಹನಗಳ ನಿಲುಗಡೆ ನಿಷೇಧ ಇರುವ ಸ್ಥಳಗಳು
ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ವೃತ್ತದಿಂದ ಸಿಟಿಒ ಜಂಕ್ಷನ್‌ವರೆಗೆ ಮತ್ತು ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ. ಇದರೊಂದಿಗೆ ಲಿಂಕ್ ರಸ್ತೆ, ರಾಜಭವನ್ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ರಸ್ತೆಗಳಲ್ಲಿಯೂ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಐಪಿಎಲ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ BMRCL ಮತ್ತು BMTC: ಇಲ್ಲಿದೆ ಮಾಹಿತಿ
ಇನ್ನು ಕಬ್ಬನ್ ರಸ್ತೆಯ ಸಿಟಿಒ ವೃತ್ತದಿಂದ ಡಿಕ್ಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಹಾಗೂ ಕಾಮರಾಜ್ ರಸ್ತೆ ಜಂಕ್ಷನ್‌ನಿಂದ ಡಿಕ್ಕೆನ್ಸನ್ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಲವೆಲ್ಲೆ ರಸ್ತೆ ಹಾಗೂ ವಿಟ್ಠಲ್ ಮಲ್ಯ ರಸ್ತೆಗಳ ಪ್ರಮುಖ ಜಂಕ್ಷನ್‌ಗಳ ನಡುವೆಯೂ ಈ ನಿಯಮ ಅನ್ವಯವಾಗಲಿದೆ. ಅಲ್ಲದೆ, ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ, ಪ್ರೆಸ್ ಕ್ಲಬ್, ಬಾಲಭವನ್ ಹಾಗೂ ಫೌಂಟನ್ ರಸ್ತೆಗಳಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚಿಸಲಾಗಿದೆ.
ವಾಹನಗಳ ಪಾರ್ಕಿಂಗ್ ಸ್ಥಳಗಳು
ಪಂದ್ಯ ವೀಕ್ಷಿಸಲು ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಟೇಡಿಯಂ ಸುತ್ತಮುತ್ತಲಿನ ವಿವಿಧೆಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರು ಸಿದ್ಧಲಿಂಗಯ್ಯ ವೃತ್ತದ ಬಳಿಯಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ ಹಾಗೂ ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಇವುಗಳ ಜೊತೆಗೆ ಫ್ರೀಡಂ ಪಾರ್ಕ್‌ನ ಬಹುಮಹಡಿ ಪಾರ್ಕಿಂಗ್ (MLCP), ಗರುಡ ಮಾಲ್, ಯು.ಬಿ. ಸಿಟಿ ಹಾಗೂ ಕಂಠೀರವ ಕ್ರೀಡಾಂಗಣದ ಆವರಣದಲ್ಲಿಯೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿಯೂ ಸಹ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಸ್ಟೇಡಿಯಂ ಪ್ರವೇಶಿಸುವು ಹೇಗೆ?
- ಕಬ್ಬನ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-1 ರಿಂದ E-3, E-18, E-19, E-22 ಮತ್ತು E-23.
- ಲಿಂಕ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-11 ರಿಂದ E-17.
- ಕ್ವೀನ್ಸ್ ರಸ್ತೆ ಮೂಲಕ: ಗೇಟ್ ಸಂಖ್ಯೆ E-05 ಮತ್ತು E-08.
- ಗೇಟ್ ಸಂಖ್ಯೆ E-10 ಕೇವಲ ಆಟಗಾರರು ಮತ್ತು VIPಗಳಿಗೆ ಮಾತ್ರ ಮೀಸಲು.
ಬಿಆರ್‌ವಿ ಮೈದಾನ (ಗೇಟ್ ನಂ. 06) ಮತ್ತು ಮನೆಕ್‌ಶಾ ಪೆರೇಡ್ ಮೈದಾನ (ಗೇಟ್ ನಂ. 03) ಓಲಾ, ಉಬರ್, ಆಟೋ ಪಿಕ್-ಅಪ್ ಮತ್ತು ಡ್ರಾಪ್ ಸ್ಥಳಗಳಿಗೆ ಅವಕಾಶ ನೀಡಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಪಾರ್ಕಿಂಗ್ ಸಮಸ್ಯೆ ನೀಗಿಸಲು ಸಾರ್ವಜನಿಕರು ಹೆಚ್ಚಾಗಿ ಮೆಟ್ರೋ ಅಥವಾ ಬಿಎಂಟಿಸಿ ಬಸ್‌ಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ವರದಿ: ವಿಕಾಸ್, ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 8:17 pm, Thu, 23 April 26
