ಆದಾಯ ತೆರಿಗೆ ರಿಟರ್ನ್Image Credit source: Getty Images
ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಕೊನೆಯ ದಿನಾಂಕ ಜುಲೈ 31ಕ್ಕೆ ಇದೆ. ನೀವು ಇನ್ನೂ ರಿಟರ್ನ್ ಸಲ್ಲಿಸಿಲ್ಲ ಎಂದಾದಲ್ಲಿ ತ್ವರಿತ ಮಾಡಿ. ಡೆಡ್ಲೈನ್ ತಪ್ಪಿಸಿಕೊಂಡರೆ ನಿಮ್ಮ ಜೇಬಿಗೆ ಕತ್ತರಿ ಬಿದ್ದೀತು. ಐಟಿಆರ್ ಅನ್ನು ನಿಗದಿತ ಅವಧಿಯೊಳಗೆ ಸಲ್ಲಿಸಿಲ್ಲವೆಂದರೆ ದಂಡ, ಬಡ್ಡಿ ಇತ್ಯಾದಿ ತಲೆನೋವು ಭರಿಸಬೇಕಾಗುತ್ತದೆ. ಈ ಬಾರಿ ಗಡುವನ್ನು ವಿಸ್ತರಿಸುವ ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದ, ತೆರಿಗೆದಾರರು ಕೊನೆಯ ದಿನದವರೆಗೂ ಕಾಯದೆ ತಕ್ಷಣವೇ ಐಟಿಆರ್ ಸಲ್ಲಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಜುಲೈ 31ರ ಒಳಗಾಗಿ ನಿಮ್ಮ ತೆರಿಗೆ ರಿಟರ್ನ್ ಫೈಲ್ ಮಾಡದಿದ್ದರೆ ನೀವು ಎಷ್ಟು ದಂಡ ತೆರಬೇಕಾಗಬಹುದು ಹಾಗೂ ಏನೆಲ್ಲಾ ನಷ್ಟಗಳನ್ನು ಅನುಭವಿಸಬೇಕಾಗಬಹುದು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ತಡವಾಗಿ ಸಲ್ಲಿಕೆಗೆ ಬೀಳುವ ದಂಡ
ಆದಾಯ ತೆರಿಗೆ ಕಾನೂನಿನ ಸೆಕ್ಷನ್ 234F ಅಡಿಯಲ್ಲಿ ತಡಪಾವತಿ ಶುಲ್ಕ ವಿಧಿಸುವ ಅವಕಾಶ ಇರುತ್ತದೆ. ಜುಲೈ 31ರ ನಂತರವೂ ನೀವು ವಿಳಂಬಿತ ರಿಟರ್ನ್ (Belated Return) ಅನ್ನು ಡಿಸೆಂಬರ್ 31ರ ಒಳಗೆ ಸಲ್ಲಿಸಲು ಅವಕಾಶವಿದೆ. ಆದರೆ ಇದಕ್ಕೆ ದಂಡ ಪಾವತಿಸಬೇಕಾಗುತ್ತದೆ:
- ರೂ. 5,00,000 ಕ್ಕಿಂತ ಹೆಚ್ಚು ಆದಾಯವಿದ್ದರೆ: ಜುಲೈ 31 ರ ನಂತರ ಐಟಿಆರ್ ಸಲ್ಲಿಸಿದರೆ ರೂ. 5,000 ತಡಪಾವತಿ ಶುಲ್ಕ (Late Fee) ವಿಧಿಸಲಾಗುತ್ತದೆ.
- ರೂ. 5,00,000 ಅಥವಾ ಅದಕ್ಕಿಂತ ಕಡಿಮೆ ಆದಾಯವಿದ್ದರೆ: ವಿಳಂಬ ಶುಲ್ಕವನ್ನು ರೂ. 1,000 ಕ್ಕೆ ಸೀಮಿತಗೊಳಿಸಲಾಗಿದೆ.
- ತೆರಿಗೆ ವಿನಾಯಿತಿ ಮಿತಿಗಿಂತ ಕಡಿಮೆ ಆದಾಯವಿದ್ದರೆ: ಯಾವುದೇ ದಂಡ ಇರುವುದಿಲ್ಲ (ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ).
ಇದನ್ನೂ ಓದಿ: ಹೊಸ ಐಆರ್ಸಿಟಿಸಿ ವೆಬ್‌ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ
ಬಾಕಿ ತೆರಿಗೆಯ ಮೇಲೆ ಮಾಸಿಕ ಶೇ. 1 ಬಡ್ಡಿ
ಸೆಕ್ಷನ್ 234A ಪ್ರಕಾರ, ನೀವು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತ ಇನ್ನೂ ಬಾಕಿ ಉಳಿದಿದ್ದರೆ ಮತ್ತು ನೀವು ಜುಲೈ 31 ರ ಒಳಗೆ ಐಟಿಆರ್ ಸಲ್ಲಿಸದಿದ್ದರೆ, ಆಗಸ್ಟ್ 1 ರಿಂದ ಐಟಿಆರ್ ಸಲ್ಲಿಸುವ ದಿನಾಂಕದವರೆಗೆ ಪ್ರತಿ ತಿಂಗಳಿಗೆ ನಿಮ್ಮ ಪಾವತಿ ಮೊತ್ತದ ಮೇಲೆ ಶೇ. 1 ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ನಷ್ಟಗಳನ್ನು ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ
ವ್ಯಾಪಾರ, ಷೇರು ಮಾರುಕಟ್ಟೆ (Capital Gains) ಅಥವಾ ಇತರ ಮೂಲಗಳಿಂದ ನಿಮಗೆ ಈ ವರ್ಷ ನಷ್ಟ ಉಂಟಾಗಿದ್ದರೆ, ಆ ನಷ್ಟವನ್ನು ಮುಂದಿನ ವರ್ಷದ ಲಾಭದ ಎದುರು ಸರಿಹೊಂದಿಸಲು (Set-off) ಅವಕಾಶ ಇರುತ್ತದೆ. ಆ ಅವಕಾಶ ಸಿಗಬೇಕೆಂದರೆ ಜುಲೈ 31 ರ ಒಳಗಾಗಿ ಐಟಿಆರ್ ಸಲ್ಲಿಸುವುದು ಕಡ್ಡಾಯ. ತಡವಾಗಿ ರಿಟರ್ನ್ಸ್ ಸಲ್ಲಿಸಿದರೆ ಈ ನಷ್ಟಗಳನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯುವ (Carry Forward) ಅವಕಾಶವನ್ನು ಕಳೆದುಕೊಳ್ಳುತ್ತೀರಿ.
ರಿಫಂಡ್ ಪಡೆಯುವುದು ವಿಳಂಬವಾಗುತ್ತದೆ
ನೀವು ಹೆಚ್ಚಿನ ಟಿಡಿಎಸ್ (TDS) ಕಡಿತದಿಂದಾಗಿ ಸರ್ಕಾರದಿಂದ ರೀಫಂಡ್ (Tax Refund) ಪಡೆಯಬೇಕಾಗಿದ್ದರೆ, ಜುಲೈ 31 ರ ಒಳಗೆ ಸಲ್ಲಿಸುವುದರಿಂದ ರೀಫಂಡ್ ಬೇಗನೆ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ತಡವಾಗಿ ಸಲ್ಲಿಸಿದಷ್ಟೂ ರೀಫಂಡ್ ಪ್ರಕ್ರಿಯೆ ತಡವಾಗುತ್ತದೆ ಹಾಗೂ ನಿಮ್ಮ ಹಣ ಸಿಗುವುದು ವಿಳಂಬವಾಗುತ್ತದೆ.
ಇದನ್ನೂ ಓದಿ: ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್; ಗೇಮ್ ಚೇಂಜರ್ ಯೋಜನೆ; ಏನಿದರ ವಿಶೇಷತೆ?
ಹಳೆಯ ಟ್ಯಾಕ್ಸ್ ರಿಜೈಮ್ ಆಯ್ಕೆ ಇರುವುದಿಲ್ಲ
ಒಂದು ವೇಳೆ ನೀವು ಈ ವರ್ಷ ಜುಲೈ 31 ರ ಗಡುವು ಮೀರಿದ ನಂತರ ವಿಳಂಬಿತ ರಿಟರ್ನ್ (Belated Return) ಸಲ್ಲಿಸಿದರೆ, ನಿಮಗೆ ಹಳೆಯ ತೆರಿಗೆ ಪದ್ಧತಿಯನ್ನು (Old Tax Regime) ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ. ನೀವು ಕಡ್ಡಾಯವಾಗಿ ಹೊಸ ತೆರಿಗೆ ಪದ್ಧತಿಯಡಿಯಲ್ಲೇ (New Tax Regime) ಐಟಿಆರ್ ಸಲ್ಲಿಸಬೇಕಾಗುತ್ತದೆ.
ಜೈಲು ಶಿಕ್ಷೆಯೂ ಆಗಬಹುದು ಎಚ್ಚರ!
ತೆರಿಗೆ ಇಲಾಖೆಯು ನೋಟಿಸ್ ನೀಡಿದ ಮೇಲೂ ಉದ್ದೇಶಪೂರ್ವಕವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸದೆ ತಪ್ಪಿಸಿಕೊಳ್ಳುವವರಿಗೆ ಸೆಕ್ಷನ್ 276CC ಅಡಿಯಲ್ಲಿ 3 ತಿಂಗಳಿನಿಂದ 2 ವರ್ಷಗಳವರೆಗೆ ಮತ್ತು ಬಾಕಿ ತೆರಿಗೆ ಮೊತ್ತ ದೊಡ್ಡದಾಗಿದ್ದರೆ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಕೊನೆಯ ದಿನಗಳಲ್ಲಿ ವೆಬ್‌ಸೈಟ್ ಸರ್ವರ್ ನಿಧಾನವಾಗುವ ಸಾಧ್ಯತೆಗಳಿರುವುದರಿಂದ ಇಂದೇ ನಿಮ್ಮ Form 16, Form 26AS ಮತ್ತು AIS (Annual Information Statement) ದಾಖಲೆಗಳನ್ನು ಪರಿಶೀಲಿಸಿ, ತಕ್ಷಣವೇ ಐಟಿಆರ್ ಸಲ್ಲಿಸಿ ನಿಶ್ಚಿಂತರಾಗಿರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
