ಪಂಜಾಬ್, ಏಪ್ರಿಲ್ 15: ಹವ್ಯಾಸ ಹಿತವಾಗಿದ್ದರೆ ಚೆಂದ, ಅದು ಮಿತಿ ಮೀರಿದರೆ ವಿಷಾದವೇ ಗತಿ ಎಂಬ ಮಾತಿಗೆ ಪಂಜಾಬ್‌ನ ಐಪಿಎಲ್ ಮೈದಾನ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ರೋಮಾಂಚಕ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಮಾಡಬಾರದ ಸಾಹಸಕ್ಕೆ ಕೈ ಹಾಕಿ ಈಗ ಬೆಲೆಬಾಳುವ ಉಂಗುರ ಕಳೆದುಕೊಂಡು ಕಂಗಾಲಾಗಿದ್ದಾರೆ.
ಏನಿದು ಘಟನೆ?
ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರಿಗೆ ಪಂದ್ಯಕ್ಕಿಂತ ‘ರೀಲ್ಸ್’ ಮಾಡುವುದರಲ್ಲಿ ನಿರತರಾಗಿದ್ದರು. ತಮ್ಮ ಬೆರಳಿನಲ್ಲಿದ್ದ 70,000 ರೂಪಾಯಿ ಮೌಲ್ಯದ ಉಂಗುರವನ್ನು ಎಸೆದು ವಿಡಿಯೋ ಮಾಡಲು ಮುಂದಾದರು.
ವಿಡಿಯೋದಲ್ಲಿ ಉಂಗುರವು ಗಾಳಿಯಲ್ಲಿ ತೇಲುವಂತೆ ಸೆರೆಹಿಡಿಯುವುದು ಅವರ ಉದ್ದೇಶವಾಗಿತ್ತು. ಆದರೆ ಕ್ಯಾಮೆರಾ ಆಂಗಲ್ ಸೆಟ್ ಮಾಡುವ ಭರದಲ್ಲಿ, ಉಂಗುರ ಕೈಜಾರಿತ್ತು. ಮಹಿಳೆಯ ಕೈಗೆ ಸಿಗದೆ ಸ್ಟೇಡಿಯಂನ ಮೆಟ್ಟಿಲುಗಳ ನಡುವೆ ಬಿದ್ದಿತ್ತು. ಒಂದು ಕ್ಷಣ ಏನಾಯಿತು ಎಂದು ತಿಳಿಯದೆ ಮಹಿಳೆ ದಿಗ್ಭ್ರಮೆಗೊಂಡು ಕುಳಿತ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮಧುಪ್ರಿಯಾ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಉಂಗುರ ಹುಡುಕಿಕೊಡುವಂತೆ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ. ಆದರೆ ಸಹಾಯ ಮಾಡುವ ಬದಲು ಜನರು ಮಹಿಳೆಯ ನಡೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಅವರಿಗೆ ಆ ಉಂಗುರ ಅಷ್ಟು ಇಷ್ಟವಿದ್ದಿದ್ದರೆ ನಕಲಿ ಉಂಗುರ ಬಳಸಿ ರೀಲ್ ಮಾಡಬೇಕಿತ್ತು ಎಂದು ಒಬ್ಬರು ಹೇಳಿದ್ದಾರೆ. ಕಳೆದುಹೋದ ಉಂಗುರ ಎಷ್ಟೇ ಹುಡುಕಿದರೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ, ಐಪಿಎಲ್‌ನ ಸಿಕ್ಸರ್-ಬೌಂಡರಿಗಳಿಗಿಂತ ಈ ಮಹಿಳೆಯ ‘ಉಂಗುರ ಪುರಾಣ’ವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಸಿಬಿಸಿ ಚರ್ಚೆಯ ವಿಷಯವಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ