ಬೆಂಗಳೂರು, ಏ.20: ಬೆಂಗಳೂರಿನ ಗುಂಡಿಗಳ ಬಗ್ಗೆ ದಿನಕ್ಕೊಂದು ಪೋಸ್ಟ್ಗಳು ವೈರಲ್ ಆಗುತ್ತ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತದೆ. ಇದೀಗ ಉದ್ಯಮಿಯೊಬ್ಬರು ತುಂಬಾ ವಿಭಿನ್ನವಾಗಿ ಬೆಂಗಳೂರಿನ ಗುಂಡಿಗಳ ಬಗ್ಗೆ ಅಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಅಖಿಲ್ ಹೇಮಾದ್ರಿ ಎಂಬುವವರು ತಮ್ಮ ಕೋಟಿ ಬೆಲೆಯ ಐಷಾರಾಮಿ ಪೋರ್ಷೆ (Porsche) ಕಾರನ್ನೇ ರಸ್ತೆ ದುರಸ್ತಿ ಕಾರ್ಯಕ್ಕೆ ಬಳಸಿ ಸುದ್ದಿಯಾಗಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕೂಡ ಅಚ್ಚರಿಗೊಂಡಿದ್ದಾರೆ.
ಇನ್ನು ಈ ಬಗ್ಗೆ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವಿಡಿಯೋದಲ್ಲಿ ಅಖಿಲ್ ಅವರು ತಮ್ಮ ಐಷಾರಾಮಿ ಪೋರ್ಷೆ ಕಾರಿನಲ್ಲಿ ರಸ್ತೆ ಗುಂಡಿ ಇರುವ ಜಾಗಕ್ಕೆ ಬರುವುದನ್ನು ಇದರಲ್ಲಿ ಕಾಣಬಹುದು. ನಂತರ ಕಾರಿನಿಂದ ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಹೊರತೆಗೆಯುತ್ತಾರೆ. ಇಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿ ವಿಚಾರವೆಂದರೆ, ಅವರು ಆ ಬೆಲೆಬಾಳುವ ಕಾರಿನ ಬಾನೆಟ್ (Bonnet) ಅನ್ನೇ ಸಿಮೆಂಟ್ ಮಿಶ್ರಣ ಮಾಡುವ ವಸ್ತುವಾಗಿ ಉಪಯೋಗಿಸಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
ಬಾನೆಟ್ ಮೇಲೆ ಸಿಮೆಂಟ್ ಮತ್ತು ನೀರನ್ನು ಬೆರೆಸಿ, ಹಾರೆ ಹಿಡಿದು ತಾವೇ ರಸ್ತೆಯ ಗುಂಡಿಯನ್ನು ಮುಚ್ಚಿದ್ದಾರೆ. ಈ ವೀಡಿಯೋದೊಂದಿಗೆ ಅಖಿಲ್ ಅವರು ಒಂದು ಮಹತ್ವದ ಸಂದೇಶವನ್ನೂ ಹಂಚಿಕೊಂಡಿದ್ದಾರೆ. “ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಕೇವಲ ಸರ್ಕಾರದ ಮೇಲೆ ಅವಲಂಬಿತರಾಗುವುದು ಸರಿಯಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿ ನಾಗರಿಕರೂ ಪಾಲ್ಗೊಳ್ಳಬೇಕು” ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ!
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ. “ಇದು ಕೇವಲ ರಸ್ತೆ ಗುಂಡಿ ಮುಚ್ಚುವ ಕೆಲಸವಲ್ಲ, ಬದಲಿಗೆ ಸರ್ಕಾರದ ವಿಳಂಬ ನೀತಿಯ ವಿರುದ್ಧದ ಸೃಜನಾತ್ಮಕ ಪ್ರತಿಭಟನೆ” ಎಂದು ಕೆಲವರು ಶ್ಲಾಘಿಸಿದ್ದಾರೆ. “ಪೋರ್ಷೆ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಕಲೆಸುವುದು ಕೇವಲ ಪ್ರಚಾರಕ್ಕಾಗಿ (Stunt) ಮಾಡಿದ ಕೆಲಸ” ಎಂದು ಹಲವರು ಟೀಕಿಸಿದ್ದಾರೆ.
ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
