ಹಾಸನ, ಆಗಸ್ಟ್ 17: ಜಿಲ್ಲೆಯಲ್ಲಿ ಮನೆಯಲ್ಲಿ ಜನರು ಇರುವಾಗಲೇ ಅವರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನದ ಎಸ್.ಪಿ. ಶುಭಾನ್ವಿತ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ.
ಜೂನ್ 2ರಂದು ಆಲೂರು ತಾಲೂಕಿನ ಮಣಿಪುರ ಗ್ರಾಮದ ನಿವೃತ್ತ ನೌಕರ ಚಂದ್ರಶೇಖರಯ್ಯ ಅವರ ಮನೆಯಲ್ಲಿ ಮತ್ತು ಜುಲೈ 22ರಂದು ಈಶ್ವರಹಳ್ಳಿ ಕೂಡುಗೆ ಗ್ರಾಮದ ಮಂಜೆಗೌಡರ ಮನೆಯಲ್ಲಿ ಒಟ್ಟು ಎರಡು ದರೋಡೆ ಪ್ರಕರಣಗಳು ನಡೆದಿತ್ತು. ಎರಡೂ ಪ್ರಕರಣಗಳಲ್ಲಿ ಸುಮಾರು 19.5 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ದರೋಡೆಕೋರರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡಿದ್ದರು.
ಪ್ರಕರಣದ ಗಂಭೀರತೆ ಅರಿತ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಕರೆಗಳ ಆಧಾರದ ಮೇಲೆ ಆಗಸ್ಟ್ 7ರಂದು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಯಿತು. ಬಂಧಿತರಲ್ಲಿ ದಕ್ಷಿಣ ಕನ್ನಡದ ಅಶ್ರಫ್, ಇಬ್ರಾಹಿಂ, ಹಾವೇರಿಯ ಈರಣ್ಣ, ಹಮೀದ್, ಸಂಕೇತ್, ರಘು, ಮತ್ತು ಹಾಸನ ಮೂಲದ ಸುಲೈಮಾನ್, ಭರತ್ ಸೇರಿದ್ದಾರೆ. ಇಬ್ರಾಹಿಂ ಮತ್ತು ಈರಣ್ಣ ಮೇಲೆ ಕರ್ನಾಟಕ ಮತ್ತು ಕೇರಳದಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
