ಒಂದಾಗುತ್ತಿದೆ ‘ಪ್ರೇಮಂ’ ಜೋಡಿ, ಮತ್ತೆ ನಡೆಯುತ್ತಾ ಮ್ಯಾಜಿಕ್ – Kannada News | Premam movie hero and director joining hands after 11 years

ಮಲಯಾಳಂ (Malayalam) ಸಿನಿಮಾಗಳಿಗೆ ಇಂದು ವಿಶ್ವದಾದ್ಯಂತ ಬೇಡಿಕೆ ಇದೆ. ಅಸಲಿಗೆ ಮಲಯಾಳಂ ಚಿತ್ರರಂಗ ದಶಕಗಳಿಂದಲೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಲೇ ಬಂದಿದೆ ಆದರೆ ಆಗಿದ್ದ ತಂತ್ರಜ್ಞಾನದ ಮಿತಿ, ಅಂತರ್ಜಾಲದ ಮಿತಿಯಿಂದಾಗಿ ಮಲಯಾಳಂ ಸಿನಿಮಾಗಳು ಹೆಚ್ಚು ಪ್ರಶಂಸೆ ಮತ್ತು ಜನಪ್ರಿಯತೆ ಪಡೆದಿರಲಿಲ್ಲ. ಆದರೆ ಅದೆಲ್ಲ ಬದಲಾಗಿದ್ದು ‘ಬೆಂಗಳೂರು ಡೇಸ್’ ಮತ್ತು ‘ಪ್ರೇಮಂ’ ಸಿನಿಮಾ ಮೂಲಕ. ಈ ಎರಡು ಸಿನಿಮಾಗಳು ಮಲಯಾಳಂ ಸಿನಿಮಾವನ್ನು ಇಡೀ ಭಾರತಕ್ಕೆ ತಲುಪಿಸುವ ಕೆಲಸ ಮಾಡಿದವು. ಅದರಲ್ಲೂ ‘ಪ್ರೇಮಂ’ ಸಿನಿಮಾ ಕೇರಳದ ಹೊರಗೂ ದೊಡ್ಡ ಬ್ಲಾಕ್ ಬಸ್ಟರ್ ಆಯ್ತು. ವೆಬ್​​ಸೈಟ್​​ಗಳಲ್ಲಿ ಡೌನ್​​ಲೋಡ್ ಮಾಡಿಕೊಂಡು ಜನ ನೋಡಿದರು. ಇದೀಗ ಅದೇ ಸಿನಿಮಾದ ಜೋಡಿ ಬಹಳ ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದೆ.

‘ಪ್ರೇಮಂ’ ಸಿನಿಮಾವನ್ನು ಅಲ್ಫೋನ್ಸ್ ಪುತ್ತೆರನ್ ನಿರ್ದೇಶನ ಮಾಡಿ, ನಿವಿನ್ ಪೌಲಿ ನಟಿಸಿದ್ದರು. ಅದೇ ಸಿನಿಮಾ ಮೂಲಕ ಸಾಯಿ ಪಲ್ಲವಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ 11 ವರ್ಷಗಳ ಬಳಿಕ ನಿವಿನ್ ಪೌಲಿ ಮತ್ತು ಅಲ್ಫೋನ್ಸ್ ಪುತ್ತೆರನ್ ಮತ್ತೆ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ. ಈ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡುತ್ತಿದ್ದು, ಸಿನಿಮಾಕ್ಕೆ ‘ವಿಜಯನ್’ ಎಂದು ಹೆಸರಿಡಲಾಗಿದೆ. ಸಿನಿಮಾ ಘೋಷಣೆಯಾಗಿದ್ದು, ಈ ಸಿನಿಮಾ ಬೈಕ್ ರೈಡಿಂಗ್ ಕುರಿತಾದ ಕತೆಯನ್ನು ಒಳಗೊಂಡಿರಲಿದೆಯಂತೆ.

ಬೈಕರ್, ಬೈಕಿಂಗ್ ಅದರ ಸುತ್ತ ನಡೆಯುವ ಹಲವು ಅಂಶಗಳನ್ನು ಈ ಸಿನಿಮಾ ಒಳಗೊಂಡಿರಲಿದೆ. ಸಿನಿಮಾದ ಕತೆ, ಚಿತ್ರಕತೆ ಅಲ್ಫೋನ್ಸ್ ಬರೆದಿರುವ ಜೊತೆಗೆ ಸಿನಿಮಾದ ನಿರ್ದೇಶನ ಮತ್ತು ಎಡಿಟಿಂಗ್ ಸಹ ಮಾಡಲಿದ್ದಾರೆ. ಸಿನಿಮಾಕ್ಕೆ ಖುದ್ದು ನಿವಿನ್ ಪೌಲಿ ಹಾಗೂ ಟ್ಯಾನ್ಸನ್ ಟೋನಿ, ಸುನಿಲ್ ರಮಾಡಿ ಅವರುಗಳು ಬಂಡವಾಳ ಹೂಡಿದ್ದಾರೆ. ಸಿನಿಮಾದ ಇತರೆ ಪಾತ್ರವರ್ಗವನ್ನು ಇನ್ನಷ್ಟೆ ಘೋಷಿಸಬೇಕಿದ್ದು, ಸಿನಿಮಾ ಮೂಲಕ ಸಾಯಿ ಪಲ್ಲವಿ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಾರಾ ಎಂಬ ಕುತೂಹಲವೂ ಇದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಅಲ್ಫೋನ್ಸ್ ಮತ್ತು ನಿವಿನ್ ಅವರಿಗೆ ಇದು ಮೂರನೇ ಸಿನಿಮಾ. ಅಲ್ಫೋನ್ಸ್ ಮೊದಲಿಗೆ ‘ನೇರಂ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದರು. ಒಂದೇ ದಿನದಲ್ಲಿ ನಡೆಯುವ ಕತೆ ಹೊಂದಿರುವ ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಕನ್ನಡ ಸೇರಿದಂತೆ ಹಲವು ಭಾಷೆಗೆ ರೀಮೇಕ್ ಸಹ ಆಗಿತ್ತು. ಆ ಸಿನಿಮಾನಲ್ಲಿ ನಿವಿನ್ ಪೌಲಿಯೇ ನಾಯಕ. ಬಳಿಕ ‘ಪ್ರೇಮಂ’ ಮಾಡಿದರು. ಅದರಲ್ಲೂ ನಿವಿನ್ ಪೌಲಿ ನಾಯಕ. ಆ ಬಳಿಕ ಏಳು ವರ್ಷ ಯಾವ ಸಿನಿಮಾ ನಿರ್ದೇಶನ ಮಾಡದಿದ್ದ ಅಲ್ಫೋನ್ಸ್ 2022 ರಲ್ಲಿ ‘ಗೋಲ್ಡ್’ ಹೆಸರಿನ ಸಿನಿಮಾ ನಿರ್ದೇಶಿಸಿದರು. ಆ ಸಿನಿಮಾನಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕ, ನಯನತಾರಾ ನಾಯಕಿ. ಆ ಸಿನಿಮಾ ಅಷ್ಟಾಗಿ ಗಮನ ಸೆಳೆಯಲಿಲ್ಲ. ಈಗ ‘ವಿಜಯನ್’ ಮೂಲಕ ಮತ್ತೆ ಬಂದಿದ್ದಾರೆ. ಈ ಬಾರಿ ಅವರ ಅದೃಷ್ಟದ ನಾಯಕ ಜೊತೆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *