ಒಂದು ಫೋನ್ ಕಾಲ್, ಶಾಂತಿ ಮಾತುಕತೆ ಫೇಲ್: ಪಾಕ್ ಸಂಧಾನದ ನಡುವೆ ನೆತನ್ಯಾಹು ಕರೆ, ಅಮೆರಿಕ-ಇರಾನ್ ಒಪ್ಪಂದಕ್ಕೆ ಬಿತ್ತು ಬ್ರೇಕ್

ಒಂದು ಫೋನ್ ಕಾಲ್, ಶಾಂತಿ ಮಾತುಕತೆ ಫೇಲ್: ಪಾಕ್ ಸಂಧಾನದ ನಡುವೆ ನೆತನ್ಯಾಹು ಕರೆ, ಅಮೆರಿಕ-ಇರಾನ್ ಒಪ್ಪಂದಕ್ಕೆ ಬಿತ್ತು ಬ್ರೇಕ್

ಟೆಹ್ರಾನ್, ಏಪ್ರಿಲ್ 13: ಇಸ್ಲಾಮಾಬಾದ್‌ನ ಐಷಾರಾಮಿ ಹೋಟೆಲ್‌ನಲ್ಲಿ  21 ಗಂಟೆಗಳ ಕಾಲ ನಡೆದ ಅಮೆರಿಕ ಮತ್ತು ಇರಾನ್(Iran) ನಡುವಿನ ಹೈ-ವೋಲ್ಟೇಜ್ ಸಂಧಾನವು ಅಂತಿಮ ಹಂತಕ್ಕೆ ತಲುಪಿತ್ತು. ಜಗತ್ತೇ ಉಸಿರು ಬಿಗಿಹಿಡಿದು ಶಾಂತಿಯ ನಿರೀಕ್ಷೆಯಲ್ಲಿದ್ದಾಗ, ಬಂದ ಆ ಒಂದು ‘ಫೋನ್ ಕಾಲ್’ ಇಡೀ ಚಿತ್ರಣವನ್ನೇ ಬದಲಿಸಿತು. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದ್ದ ಅಮೆರಿಕ-ಇರಾನ್ ನಡುವಿನ ಐತಿಹಾಸಿಕ ಶಾಂತಿ ಮಾತುಕತೆಗಳು ಹಳಿ ತಪ್ಪಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ದೂರವಾಣಿ ಕರೆಯೇ ಕಾರಣ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.

ಸಂಧಾನದ ಮೇಜಿನ ಮೇಲೆ ಪ್ರಗತಿ ಕಾಣುತ್ತಿದ್ದಾಗಲೇ ನೆತನ್ಯಾಹು ಅವರು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಕರೆ ಮಾಡಿದ್ದು, ಅಲ್ಲಿಂದಲೇ ಎಲ್ಲವೂ ಉಲ್ಟಾ ಆಯಿತು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ದೂರಿದ್ದಾರೆ.
ಇರಾನ್ ವಿದೇಶಾಂಗ ಸಚಿವರ ಪ್ರಕಾರ, ಮಾತುಕತೆಯ ನಡುವೆಯೇ ನೆತನ್ಯಾಹು ಅವರು ವ್ಯಾನ್ಸ್ ಅವರ ಗಮನವನ್ನು ಇಸ್ರೇಲ್‌ನ ಹಿತಾಸಕ್ತಿಗಳತ್ತ ತಿರುಗಿಸಿದರು.

ಯುದ್ಧದ ಮೂಲಕ ಇಸ್ರೇಲ್ ಮತ್ತು ಅಮೆರಿಕ ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲವೋ, ಅದನ್ನು ಸಂಧಾನದ ಮೇಜಿನ ಮೇಲೆ ಇರಾನ್‌ನಿಂದ ಕಸಿದುಕೊಳ್ಳಲು ಅಮೆರಿಕ ಪ್ರಯತ್ನಿಸಿತು, ಎಂದು ಅರಘ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಕರೆಯ ನಂತರ ಅಮೆರಿಕದ ನಿಲುವು ಅತ್ಯಂತ ಕಠಿಣವಾಯಿತು ಎಂದು ಅವರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಇರಾನ್-ಅಮೆರಿಕ ಸಂಧಾನಕ್ಕೆ ‘ಪರಮಾಣು’ ತಡೆ: ಇಸ್ಲಾಮಾಬಾದ್ ಮ್ಯಾರಥಾನ್ ಮಾತುಕತೆ ಹಳಿ ತಪ್ಪಿದ್ದೇಕೆ?

ಇರಾನ್‌ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕಿತ್ತುಹಾಕುವುದು.ಇರಾನ್ ಬಳಿ ಇರುವ ಯುರೇನಿಯಂ ದಾಸ್ತಾನನ್ನು ಬೇರೆಡೆಗೆ ವರ್ಗಾಯಿಸುವುದು. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಹಡಗುಗಳಿಗೆ ಜಲಸಂಧಿಯ ಮೂಲಕ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದು.

ವ್ಯಾನ್ಸ್ ಅವರು ಇವುಗಳನ್ನು ವಾಷಿಂಗ್ಟನ್‌ನ ಅಂತಿಮ ಮತ್ತು ಅತ್ಯುತ್ತಮ ಆಫರ್ ಎಂದು ಹೇಳಿದಾಗ, ಇರಾನ್ ಅದನ್ನು ತನ್ನ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕರೆದು ತಿರಸ್ಕರಿಸಿತು. ಏಪ್ರಿಲ್ 9ರಂದು ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ 119 ಡಾಲರ್ ಇದ್ದ ತೈಲ ಬೆಲೆ 95 ಡಾಲರ್​ಗೆ ಇಳಿದಿತ್ತು. ಈಗ ಮಾತುಕತೆ ಮುರಿದುಬಿದ್ದಿರುವುದರಿಂದ ತೈಲ ಬೆಲೆ ಮತ್ತೆ 100 ಡಾಲರ್ ಗಡಿ ದಾಟುವ ನಿರೀಕ್ಷೆ ಇದೆ. ಈ ಬಿಕ್ಕಟ್ಟು ಅಮೆರಿಕದ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಯಲು ಮಾಡಿದೆ.

ಸ್ಪೇನ್ ಮತ್ತು ಇಟಲಿಯಂತಹ ದೇಶಗಳು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗೆ ತಮ್ಮ ವಾಯುಪ್ರದೇಶ ನೀಡಲು ನಿರಾಕರಿಸಿವೆ. ಎರಡು ವಾರಗಳ ಕಾಲ ಘೋಷಿಸಲಾಗಿದ್ದ ಕದನ ವಿರಾಮ ಮುಕ್ತಾಯಗೊಳ್ಳಲು ಇನ್ನು ಕೇವಲ 9 ದಿನಗಳು ಮಾತ್ರ ಉಳಿದಿವೆ. ಈ ಸಮಯದಲ್ಲಿ ಹೊಸ ಒಪ್ಪಂದವಾಗದಿದ್ದರೆ, ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಘರ್ಜನೆ ಆರಂಭವಾಗಬಹುದು.

ಒಂದು ಫೋನ್ ಕರೆಯಿಂದ ಇಡೀ ವಿಶ್ವದ ಶಾಂತಿ ಪ್ರಕ್ರಿಯೆ ಹಳಿ ತಪ್ಪಿದೆಯೇ? ನೆತನ್ಯಾಹು ಅವರ ಹಸ್ತಕ್ಷೇಪವು ಇರಾನ್-ಅಮೆರಿಕ ಯುದ್ಧಕ್ಕೆ ಮುನ್ನುಡಿ ಬರೆದಿದೆಯೇ? ಎಂಬ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link

Leave a Reply

Your email address will not be published. Required fields are marked *