ಭುವನೇಶ್ವರ, ಜೂನ್ 22: ಮಹಿಳೆಯೊಬ್ಬರು ಎರಡು ಪ್ರತ್ಯೇಕ ವಾಹನಗಳಲ್ಲಿ ತಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಒಡಿಶಾದಲ್ಲಿ ನಡೆದಿದೆ. ಮೊದಲ ಮಗು ಚಲಿಸುತ್ತಿರುವ ರೈಲಿನಲ್ಲಿ ಜನಿಸಿದರೆ ಎರಡನೇ ಮಗು(Baby) ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಆಂಬ್ಯುಲೆನ್ಸ್ ಒಳಗೆ ಜನಿಸಿದೆ. ಸಹ ಪ್ರಯಾಣಿಕರು, ರೈಲ್ವೆ ಅಧಿಕಾರಿಗಳು ಮತ್ತು ವೈದ್ಯಕೀಯ ತಂಡದ ಸಮಯಪ್ರಜ್ಞೆಯಿಂದಾಗಿ ತಾಯಿ ಮತ್ತು ಇಬ್ಬರೂ ಶಿಶುಗಳು ಸಂಪೂರ್ಣ ಸುರಕ್ಷಿತವಾಗಿದ್ದಾರೆ.
ಈ ರೋಮಾಂಚನಕಾರಿ ಘಟನೆ ರೂರ್ಕೆಲಾ-ಗುಣುಪುರ್ ‘ರಾಜ್ಯರಾಣಿ ಎಕ್ಸ್‌ಪ್ರೆಸ್’ ರೈಲಿನಲ್ಲಿ ಸಂಭವಿಸಿದೆ. ಮಹಿಳೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಸಹ ಪ್ರಯಾಣಿಕರು ತಕ್ಷಣವೇ ‘ರೈಲ್ ಮದದ್’ ಪೋರ್ಟಲ್ ಮೂಲಕ ರೈಲ್ವೆ ಇಲಾಖೆಗೆ ತುರ್ತು ಸಂದೇಶ ರವಾನಿಸಿದರು.
ಕಟಕ್ ರೈಲು ನಿಲ್ದಾಣದಲ್ಲಿ ವೈದ್ಯಕೀಯ ನೆರವು ನೀಡಲು ಆರ್‌ಪಿಎಫ್ (RPF) ಪಡೆ ಸಿದ್ಧವಾಗಿ ನಿಂತಿತ್ತು. ಆದರೆ, ರೈಲು ನಿಲ್ದಾಣವನ್ನು ತಲುಪುವ ಮೊದಲೇ ಚಲಿಸುವ ರೈಲಿನೊಳಗೆ ಮಹಿಳೆ ತನ್ನ ಮೊದಲ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಮತ್ತಷ್ಟು ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ ಋತ್ ಪ್ರಭು?
ರೈಲು ಕಟಕ್ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲ್ವೆ ಸಿಬ್ಬಂದಿ ಮಹಿಳೆಯನ್ನು 108 ಆಂಬ್ಯುಲೆನ್ಸ್ ಮೂಲಕ ತಕ್ಷಣವೇ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದರು. ಆದರೆ ಆಸ್ಪತ್ರೆ ತಲುಪುವ ಮೊದಲೇ, ಚಲಿಸುವ ಆಂಬ್ಯುಲೆನ್ಸ್ ಒಳಗೆ ಮಹಿಳೆಗೆ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡು, ಆಕೆ ತನ್ನ ಎರಡನೇ ಮಗುವಿಗೂ ಯಶಸ್ವಿಯಾಗಿ ಜನ್ಮ ನೀಡಿದಳು.
ಪ್ರಸ್ತುತ ಆಸ್ಪತ್ರೆಯ ವೈದ್ಯರು ತಾಯಿ ಮತ್ತು ಇಬ್ಬರೂ ಅವಳಿ ಮಕ್ಕಳನ್ನು ಪರೀಕ್ಷಿಸಿದ್ದು, ಮೂವರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಅತ್ಯಂತ ಕಠಿಣ ಮತ್ತು ಸವಾಲಿನ ಸಂದರ್ಭದಲ್ಲಿ ಎರಡು ಪ್ರತ್ಯೇಕ ಚಲಿಸುವ ವಾಹನಗಳಲ್ಲಿ ಸುರಕ್ಷಿತ ಹೆರಿಗೆಯಾಗುವಂತೆ ನೋಡಿಕೊಂಡ ಆರ್‌ಪಿಎಫ್ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು ಮತ್ತು ಸಹ ಪ್ರಯಾಣಿಕರ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
