ಇತ್ತೀಚಿನ ದಿನಗಳಲ್ಲಿ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್, ಆಸಿಡಿಟಿ ಸಮಸ್ಯೆಗಳು ಅನೇಕ ಮಂದಿಯನ್ನು ಕಾಡುತ್ತಿವೆ. ಅನಿಯಮಿತ ಆಹಾರ ಪದ್ಧತಿ, ಹೊರಗಿನ ಆಹಾರ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಒತ್ತಡದ ಜೀವನಶೈಲಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮನೆಮದ್ದಿನತ್ತ ಮುಖ ಮಾಡುತ್ತಾರೆ. ಅವುಗಳಲ್ಲಿ ಓಂ ಕಾಳು (Carom Seeds) ಅಥವಾ ಅಜ್ವೈನ್ (Ajwain) ನೀರು ಹೆಚ್ಚು ಜನಪ್ರಿಯವಾಗಿದೆ. ಆಯುರ್ವೇದದಲ್ಲಿ ಓಂ ಜೀರ್ಣಕ್ರಿಯೆಗೆ ಸಹಾಯಕವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಂ ನೀರು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸಲು ನೆರವಾಗಬಹುದು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಎಲ್ಲರೂ ಕುಡಿಯುವುದು ಸೂಕ್ತವಲ್ಲ. ಇದರ ಲಾಭಗಳು, ಸರಿಯಾದ ಬಳಕೆ ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಓಂ ಕಾಳಿನ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು:
ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗೆ ನೆರವು
ಓಂ ಕಾಳಿನಲ್ಲಿರುವ ಥೈಮಾಲ್ (Thymol) ಎಂಬ ಸಂಯುಕ್ತವು ಜೀರ್ಣರಸ ಮತ್ತು ಜೀರ್ಣಕ ಎನ್ಜೈಮ್‌ಗಳ ಉತ್ಪತ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಇದರಿಂದ ಆಹಾರ ಜೀರ್ಣವಾಗಲು ನೆರವಾಗಿ ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಆಸಿಡಿಟಿ ಸಮಸ್ಯೆ ಕಡಿಮೆಯಾಗಬಹುದು.
ತೂಕ ನಿಯಂತ್ರಣಕ್ಕೆ ಸಹಕಾರಿ
ಬೆಳಿಗ್ಗೆ ಉಗುರುಬೆಚ್ಚಗಿನ ಓಂ ನೀರು ಕುಡಿಯುವುದರಿಂದ ದೇಹದ ಮೆಟಾಬಾಲಿಸಂ ಉತ್ತಮವಾಗಲು ಸಹಾಯವಾಗಬಹುದು. ಆದರೆ ಕೇವಲ ಓಂ ನೀರು ಕುಡಿದರೆ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವೂ ಅಗತ್ಯ.
ಶ್ವಾಸಕೋಶದ ಆರೋಗ್ಯಕ್ಕೆ ನೆರವು
ಓಂ ಕಾಳಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿವೆ. ಗಂಟಲು ನೋವು, ಕೆಮ್ಮು ಮುಂತಾದ ಸಂದರ್ಭಗಳಲ್ಲಿ ಇದು ಕೆಲವು ಮಟ್ಟಿಗೆ ಆರಾಮ ನೀಡಬಹುದು.
ಋತುಚಕ್ರದ ನೋವು ಕಡಿಮೆ ಮಾಡಲು ಸಹಕಾರಿ
ಕೆಲವು ಮಹಿಳೆಯರಲ್ಲಿ ಮಾಸಿಕ ಧರ್ಮದ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಉಗುರು ಬೆಚ್ಚಗಿನ ಓಂ ನೀರು ಸಹಾಯಕವಾಗಬಹುದು.
ಹೊಟ್ಟೆ ಭಾರವಾದ ಅನುಭವ ಕಡಿಮೆ ಮಾಡಬಹುದು
ಭಾರವಾದ ಊಟದ ನಂತರ ಹೊಟ್ಟೆ ತುಂಬಿದ ಅನುಭವ ಅಥವಾ ಜೀರ್ಣಕ್ರಿಯೆ ನಿಧಾನವಾಗಿರುವ ಸಂದರ್ಭಗಳಲ್ಲಿ ಓಂ ನೀರು ಕೆಲವರಿಗೆ ಆರಾಮ ನೀಡಬಹುದು.
ಓಂ ಕಾಳಿನ ನೀರನ್ನು ತಯಾರಿಸುವ ಸರಿಯಾದ ವಿಧಾನ:
ಒಂದು ಗ್ಲಾಸ್ ನೀರಿಗೆ ಒಂದು ಚಮಚ ಓಮ ಹಾಕಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಅದನ್ನು ಕುದಿಸಿ, ಶೋಧಿಸಿ ಉಗುರುಬೆಚ್ಚಗಿರುವಾಗ ಕುಡಿಯಿರಿ. ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆರಸ ಸೇರಿಸಬಹುದು.
ಯಾರು ಓಂ ಕಾಳಿನ ನೀರು ಕುಡಿಯುವಾಗ ಎಚ್ಚರಿಕೆ ವಹಿಸಬೇಕು?
- ಹೊಟ್ಟೆಯಲ್ಲಿ ಅಲ್ಸರ್ ಇರುವವರು
- ತೀವ್ರ ಆಸಿಡ್ ರಿಫ್ಲಕ್ಸ್ (GERD) ಇರುವವರು
- ಗರ್ಭಿಣಿಯರು (ವೈದ್ಯರ ಸಲಹೆಯ ನಂತರ ಮಾತ್ರ)
- ದೇಹದಲ್ಲಿ ಹೆಚ್ಚು ಉಷ್ಣತೆ ಇರುವವರು
- ನಿಯಮಿತವಾಗಿ ಔಷಧ ಸೇವಿಸುವವರು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
