‘ಓಂ ನನ್ನ ಆಲ್​ ಟೈಮ್​ ಫೇವರಿಟ್’; ಹಾಡಿ ಹೊಗಳಿದ ಪ್ರಥ್ವಿರಾಜ್ ಸುಕುಮಾರನ್ – Kannada News | Prithviraj Sukumaran Names Shivarajkumar’s Om As His All Time Favorite Indian Film

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹಲವು ದಾಖಲೆ ಬರೆದಿದ್ದ ಖ್ಯಾತಿ ‘ಓಂ’ ಚಿತ್ರಕ್ಕೆ ಇದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಈ ಸಿನಿಮಾ ಬಗ್ಗೆ ಮಾಲಿವುಡ್‌ನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಓಂ’ ಚಿತ್ರ ತಮ್ಮ ಆಲ್ ಟೈಮ್ ಫೇವರಿಟ್ ಸಿನಿಮಾಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದ 5 ಪ್ರಮುಖ ಭಾಷೆಗಳ ತಲಾ ಒಂದು ಸಿನಿಮಾವನ್ನು ಆಯ್ಕೆ ಮಾಡುವಾಗ, ಕನ್ನಡದಿಂದ ಅವರು ‘ಓಂ’ ಚಿತ್ರವನ್ನು ಹೆಮ್ಮೆಯಿಂದ ಹೆಸರಿಸಿದ್ದಾರೆ. ಉಪೇಂದ್ರ ಅವರು ಈ ಚಿತ್ರವನ್ನು ಅದ್ಭುತವಾಗಿ ಬರೆದು ನಿರ್ದೇಶಿಸಿದ್ದಾರೆ ಹಾಗೂ ಶಿವರಾಜ್‌ಕುಮಾರ್ ಅವರ ನಟನೆ ಅಪ್ರತಿಮವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಓಂ’ ಸಿನಿಮಾದ ಲೆಗಸಿ ಮತ್ತು ಇತಿಹಾಸ

1995ರಲ್ಲಿ ಬಿಡುಗಡೆಯಾದ ‘ಓಂ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. ಅಂಡರ್ ವರ್ಲ್ಡ್ ಮತ್ತು ಪ್ರೇಮಕಥೆಯನ್ನು ಬೆರೆಸಿ ಉಪೇಂದ್ರ ಅವರು ಮಾಡಿದ ಈ ಪ್ರಯೋಗ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಸಿನಿಮಾದಲ್ಲಿ ಅಂದಿನ ಕಾಲದ ರಿಯಲ್ ರೌಡಿಗಳನ್ನೇ ಬಳಸಿಕೊಂಡಿದ್ದು ಈ ಚಿತ್ರದ ದೊಡ್ಡ ಹೈಲೈಟ್ ಆಗಿತ್ತು. ಇದು ಪ್ರೇಕ್ಷಕರಿಗೆ ಹೊಸ ರೀತಿಯ ಥ್ರಿಲ್ ನೀಡಿತು.

ಇದನ್ನೂ ಓದಿ: ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ

ಶಿವರಾಜ್‌ಕುಮಾರ್ ಅವರ ಕೆರಿಯರ್‌ನಲ್ಲಿ ಸತ್ಯ ಪಾತ್ರ ಅತಿ ದೊಡ್ಡ ಬ್ರೇಕ್ ನೀಡಿತು. ಅವರ ಆವೇಶ, ಆ್ಯಕ್ಷನ್ ಮತ್ತು ಭಾವನಾತ್ಮಕ ನಟನೆಗೆ ಇಂದಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸಂಗೀತ ನಿರ್ದೇಶನದ ಹೇ ದಿನಕರ, ‘ಓ ಗುಲಾಬಿಯೇ’ ಹಾಡುಗಳು ಎವರ್‌ಗ್ರೀನ್ ಆಗಿ ಉಳಿದಿವೆ.

ಮರುಬಿಡುಗಡೆಯ ದಾಖಲೆ

‘ಓಂ’ ಸಿನಿಮಾ ಬರೋಬ್ಬರಿ 500ಕ್ಕೂ ಹೆಚ್ಚು ಬಾರಿ ಮರುಬಿಡುಗಡೆಗೊಂಡು ದಾಖಲೆ ಬರೆದಿದೆ. ಚಿತ್ರಮಂದಿರಗಳಲ್ಲಿ ಪ್ರತಿ ಬಾರಿ ಬಿಡುಗಡೆಯಾದಾಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಈ ಚಿತ್ರದ ಲೆಗಸಿಗೆ ಸಾಕ್ಷಿಯಾಗಿದೆ. ಪೃಥ್ವಿರಾಜ್ ಸುಕುಮಾರನ್ ಅವರಂತಹ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ನಟ ‘ಓಂ’ ಚಿತ್ರವನ್ನು ಭಾರತದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಗುರುತಿಸಿರುವುದು ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಶ್ನೆ: ಓಂ ರಿಲೀಸ್ ಆಗಿದ್ದು ಯಾವಾಗ?
ಉತ್ತರ: 
1995

ಪ್ರಶ್ನೆ: ಸಿನಿಮಾ ಎಷ್ಟು ಬಾರಿ ರೀ ರಿಲೀಸ್ ಆಗಿದೆ?
ಉತ್ತರ:
500ಕ್ಕೂ ಹೆಚ್ಚು ಬಾರಿ

ಪ್ರಶ್ನೆ: ಓಂ ಸಿನಿಮಾ ನಿರ್ದೇಶನ ಯಾರದ್ದು?
ಉತ್ತರ:
ಉಪೇಂದ್ರ

Source link

Leave a Reply

Your email address will not be published. Required fields are marked *