ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ‘ಓಜಿ’ ಮೂಲಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಅತ್ಯಂತ ಸ್ಟೈಲಿಶ್ ಆಗಿ ಬೆಳ್ಳಿಪರದೆ ಮೇಲೆ ತೋರಿಸಿ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡಿದ ನಿರ್ದೇಶಕ ಸುಜೀತ್. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಈ ಸಿನಿಮಾ, ಸ್ವತಃ ಪವನ್ ಕಲ್ಯಾಣ್ ಅವರಿಗೂ ಭಾರಿ ಖುಷಿ ಕೊಟ್ಟಿತ್ತು. ಒಂದು ವೇಳೆ ಒಳ್ಳೆಯ ಲೈನ್ ಸಿಕ್ಕರೆ ಸೀಕ್ವೆಲ್ ಮಾಡಲು ಸಿದ್ಧ ಎಂದು ಪವನ್ ಆಗಲೇ ಆಸಕ್ತಿ ತೋರಿಸಿದ್ದರು. ಅಂದಿನಿಂದಲೂ ಫ್ಯಾನ್ಸ್ ‘ಓಜಿ 2’ ಅಪ್‌ಡೇಟ್‌ಗಾಗಿ ಕಾದು ಕುಳಿತಿದ್ದಾರೆ.
ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದರೂ, ಸಿನಿಮಾ ಬಂದೇ ಬರುತ್ತೆ ಎಂಬ ನಂಬಿಕೆಯಲ್ಲಿ ಅಭಿಮಾನಿಗಳಿದ್ದರು. ಇದಕ್ಕೆ ಪೂರಕವೆಂಬಂತೆ ಪವನ್ ಕಲ್ಯಾಣ್ ಅವರ ಸ್ವಂತ ಪ್ರೊಡಕ್ಷನ್ ಹೌಸ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಬಿಗ್ ಹಿಂಟ್ ನೀಡಿದೆ. ನಿರ್ದೇಶಕ ಸುಜೀತ್ ಸದ್ಯ ವಿದೇಶದಲ್ಲಿದ್ದು, ಅವರು ಮರಳಿದ ತಕ್ಷಣ ಪವನ್ ಕಲ್ಯಾಣ್ ಅವರೊಂದಿಗೆ ‘ಓಜಿ 2’ ಚಿತ್ರದ ಶೂಟಿಂಗ್ ಟೈಮ್‌ಲೈನ್ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪ್ರೊಡಕ್ಷನ್ ಹೌಸ್ ತಿಳಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರಂತೂ ಸಿನಿಮಾ ಈ ವರ್ಷವೇ ಶುರುವಾಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ಆದರೆ ಕಾಯೋದು ಗ್ಯಾರಂಟಿ; ಕಾರಣಗಳೇನು?
ಸಿನಿಮಾ ಅನೌನ್ಸ್ ಆಗಿದ್ದರೂ, ಸದ್ಯಕ್ಕೆ ಶೂಟಿಂಗ್ ಆರಂಭವಾಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:
ರಾಜಕೀಯ ಜವಾಬ್ದಾರಿ: ಪವನ್ ಕಲ್ಯಾಣ್ ಅವರಿಗೆ ಸಿನಿಮಾಕ್ಕಿಂತ ಹೆಚ್ಚಾಗಿ ರಾಜ್ಯದ ಕಲ್ಯಾಣ ಮತ್ತು ರಾಜಕೀಯ ಕೆಲಸಗಳೇ ಮೊದಲ ಆದ್ಯತೆ. ಅದರಲ್ಲೂ ಆಂಧ್ರಪ್ರದೇಶದಲ್ಲಿ ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಪೂರ್ಣ ಪ್ರಮಾಣದಲ್ಲಿ ಶೂಟಿಂಗ್‌ಗೆ ಡೇಟ್ಸ್ ಕೊಡುವುದು ಸದ್ಯಕ್ಕೆ ಅಸಾಧ್ಯ.
ಸುಜೀತ್ ಅವರ ಮುಂದಿನ ಪ್ರಾಜೆಕ್ಟ್: ನಿರ್ದೇಶಕ ಸುಜೀತ್ ಕೇವಲ ಪವನ್ ಕಲ್ಯಾಣ್ ಅವರಿಗಾಗಿ ಕಾಯುತ್ತಾ ಕೂತಿಲ್ಲ. ಅವರು ಈಗಾಗಲೇ ನ್ಯಾಚುರಲ್ ಸ್ಟಾರ್ ನಾನಿ ಜೊತೆ ‘ಬ್ಲಡಿ ರೋಮಿಯೋ’ ಎಂಬ ದೊಡ್ಡ ಬಜೆಟ್ ಚಿತ್ರವನ್ನು ಅಧಿಕೃತವಾಗಿ ಲೈನ್-ಅಪ್ ಮಾಡಿಕೊಂಡಿದ್ದಾರೆ.
ಮತ್ತೊಂದು ಕಮಿಟ್‌ಮೆಂಟ್: ಇನ್ನೊಂದೆಡೆ, ಪವನ್ ಕಲ್ಯಾಣ್ ಅವರು ಮುಂದಿನ ದಿನಗಳಲ್ಲಿ ನಿರ್ದೇಶಕ ಸುರೇಂದರ್ ರೆಡ್ಡಿ ಜೊತೆಗೂ ಸಿನಿಮಾ ಮಾಡುವುದಾಗಿ ಮಾತು ಕೊಟ್ಟಿದ್ದಾರೆ.
ಸುಜೀತ್ ವಿದೇಶದಿಂದ ಬಂದ ನಂತರ ಇಬ್ಬರೂ ಕೂತು ಸ್ಕ್ರಿಪ್ಟ್ ಫೈನಲ್ ಮಾಡಬೇಕಿದೆ. ಪವನ್ ಕಲ್ಯಾಣ್ ಬಿಡುವಿನ ವೇಳೆಯಲ್ಲಿ ಶೂಟಿಂಗ್ ಮಾಡಲು ಒಪ್ಪಿಕೊಂಡರೂ, ಅವರ ಲಭ್ಯತೆಯ ಆಧಾರದ ಮೇಲೆ ಚಿತ್ರೀಕರಣ ತಡವಾಗುತ್ತಾ ಸಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಡಿಸಿಎಂ ಪವನ್ ಕಲ್ಯಾಣ್ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ?
‘OG 2’ ಸಿನಿಮಾ ತಾಂತ್ರಿಕವಾಗಿ ಕನ್ಫರ್ಮ್ ಆಗಿದೆ ಮತ್ತು ಕೊಟ್ಟ ಮಾತಿನಂತೆ ಸಿನಿಮಾ ಮೂಡಿಬರಲಿದೆ ಎಂದು ಪ್ರೊಡಕ್ಷನ್ ಹೌಸ್ ಭರವಸೆ ನೀಡಿದೆ. ಆದರೆ ಬಿಡುಗಡೆ ಯಾವಾಗ ಎಂಬುದಕ್ಕೆ ಸದ್ಯಕ್ಕೆ ಗ್ಯಾರಂಟಿ ಇಲ್ಲ. ಹಾಗಾಗಿ, ಅಲ್ಟಿಮೇಟ್ ಗ್ಯಾಂಗ್‌ಸ್ಟರ್ ಬ್ಯಾಂಗ್ ನೋಡಲು ಫ್ಯಾನ್ಸ್ ಇನ್ನು ದೀರ್ಘಕಾಲ ಕಾಯಲೇಬೇಕಿದೆ!
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
