IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ವಿವಾದಗಳು ಮುಂದುವರೆದಿದೆ. ಈ ವಿವಾದಗಳ ಪಟ್ಟಿಗೆ ಹೊಸ ಸೇರ್ಪಡೆ ಅರ್ಷದೀಪ್ ಸಿಂಗ್ ಅವರ ನಿಂದನೆ. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್, ತಿಲಕ್ ವರ್ಮಾ ಅವರನ್ನು ಮೈ ಬಣ್ಣವನ್ನು ಪ್ರಸ್ತಾಪಿಸಿ ಕರೆಯುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲೇನಿದೆ?
ಅರ್ಷದೀಪ್ ಸಿಂಗ್ ತಮ್ಮದೇ ಆದ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಿಲಕ್ ವರ್ಮಾ ಅವರನ್ನು ಉದ್ದೇಶಿಸಿ, “ಓಯ್ ಅಂಧೇರೇ (ಕತ್ತಲೆಯೇ), ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೀಯಾ?” ಎಂದು ಕೇಳಿದ್ದಾರೆ.
ಅಷ್ಟೇ ಅಲ್ಲದೆ ಕ್ಯಾಮೆರಾವನ್ನು ಸಹ ಆಟಗಾರ ನಮನ್ ಧೀರ್ ಕಡೆಗೆ ತಿರುಗಿಸಿ, ಅವರೇ ಪಂಜಾಬ್‌ನ ನಿಜವಾದ ‘ನೂರ್’ (ಕಾಂತಿ) ಎಂದು ಹೊಗಳಿದ್ದಾರೆ.
ಇಲ್ಲಿ ಅರ್ಷದೀಪ್ ಸಿಂಗ್ ಪಂಜಾಬಿ ಭಾಷೆಯಲ್ಲಿ ಅಂಧೇರೇ ಅಂದಿರುವುದು ಕರಿಯ ಎಂಬಾರ್ಥದಲ್ಲಿ. ಅಂದರೆ ಮೈ ಬಣ್ಣವನ್ನು ಪ್ರಸ್ತಾಪಿಸಿ ಹೀಯಾಳಿಸಿರುವುದು ಸ್ಪಷ್ಟ.
?? oye andhere pic.twitter.com/iR9Z8DZxs0
— Out Of Context Cricket (@GemsOfCricket) May 14, 2026
ಅರ್ಷದೀಪ್ ಸಿಂಗ್ ಅವರ ಈ ಮಾತಿನಿಂದ ತಿಲಕ್ ವರ್ಮಾ ಮುಜುಗರಕ್ಕೊಳಗಾದಂತೆ ಕಂಡರೂ, ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ್ದಾರೆ. “ನಾನು ಈಗಾಗಲೇ ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೇನೆ, ನಾಳಿನ ಪಂದ್ಯದ ಕಡೆ ಗಮನ ಕೊಡೋಣ” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.
ನೆಟ್ಟಿಗರ ತೀವ್ರ ಆಕ್ರೋಶ:
ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟ್ ಪ್ರೇಮಿಗಳು ಅರ್ಷದೀಪ್ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ ತಮಾಷೆಯ ಹೆಸರಿನಲ್ಲಿ ಇಂತಹ ವರ್ಣಭೇದದ ಕಾಮೆಂಟ್‌ಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಇಂತಹ ಸೂಕ್ಷ್ಮ ವಿಷಯಗಳಲ್ಲಿ ಆಟಗಾರರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ತರಬೇತಿ ನೀಡಬೇಕು ಮತ್ತು ಬಿಸಿಸಿಐ ಅರ್ಷದೀಪ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ಬ್ಯಾಟ್ ಮೂಲಕ ಉತ್ತರ:
ಅರ್ಷದೀಪ್ ಸಿಂಗ್ ಮಾತುಗಳ ಮೂಲಕ ವಿವಾದ ಸೃಷ್ಟಿಸಿದರೆ, ತಿಲಕ್ ವರ್ಮಾ ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ನೀಡಿದ 201 ರನ್ಗಳ ಗುರಿ ಬೆನ್ನತ್ತುವ ಮೂಲಕ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.